ಪಕ್ಷ ಸಂಘಟನೆಗೆ ರಾಜ್ಯದಲ್ಲಿ ಏಳು ವಿಭಾಗ, ಉಸ್ತುವಾರಿಗಳನ್ನು ನೇಮಿಸಿದ ಜೆಡಿಎಸ್

Update: 2021-01-18 18:06 GMT

ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ದತೆ: ಎಚ್‍ಡಿಕೆ

ಬೆಂಗಳೂರು, ಜ. 18: ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು ಪಕ್ಷ ಸಂಘಟನೆಗೆ ರಾಜ್ಯದ ಏಳು ವಿಭಾಗಗಳನ್ನು ರಚಿಸಿದ್ದು, ಪ್ರತಿ ವಿಭಾಗಕ್ಕೂ ಪ್ರಮುಖರ ತಂಡ ಹಾಗೂ ಉಸ್ತುವಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಸೋಮವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕೋರ್‍ಕಮಿಟಿ ರಚನೆ ಕುರಿತು ನಡೆದ ಸಭೆಯಲ್ಲಿ ಕಲ್ಯಾಣ-ಕರ್ನಾಟಕ, ಬೆಳಗಾವಿ, ಮೈಸೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ನಗರ ಸೇರಿದಂತೆ ಏಳು ವಿಭಾಗಗಳನ್ನು ಉಸ್ತುವಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಬಂಡೆಪ್ಪ ಕಾಶೆಂಪೂರ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಎಚ್.ಎಸ್.ಶಿವಶಂಕರ್, ವೆಂಕಟಶಿವಾರೆಡ್ಡಿ, ಡಾ.ಕೆ.ಶ್ರೀನಿವಾಸಮೂರ್ತಿ, ಹಾಗೂ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದು, ಆ ತಂಡಗಳಲ್ಲಿ ಪಕ್ಷದ ಮುಖಂಡರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಸಭೆಯ ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷವನ್ನು ಸಂಘಟಿಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಏಳು ವಿಭಾಗಗಳನ್ನು ರಚನೆ ಮಾಡಲಾಗಿದೆ. ಪ್ರತಿ ವಿಭಾಗಗಳಿಗೂ ತಂಡವೊಂದನ್ನು ರಚಿಸಿ, ಅದಕ್ಕೆ ಉಸ್ತುವಾರಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಸಕ್ರಿಯಗೊಳಿಸಿ ಸ್ಥಳೀಯ ಸಮಸ್ಯೆಗಳಿಗನುಗುಣವಾಗಿ ಹೋರಾಟ ನಡೆಸಲಾಗುವುದು. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುವುದು ಎಂದರು.

ಬಿಜೆಪಿ ಹಣೆಬರಹ ಗೊತ್ತು: ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಹೇಳಿಕೊಂಡಿದೆ. ಆದರೆ, ಬಿಜೆಪಿಯ ಹಣೆಬರಹ ಗೊತ್ತು. ಬಿಜೆಪಿ ಬೆಂಬಲಿತ ಸದಸ್ಯರು 36 ಸಾವಿರ ಮಂದಿ ಗೆಲುವು ಸಾಧಿಸಿದ್ದಾರೆಂದು ಹೇಳಿಕೊಂಡಿರುವುದನ್ನು ಎಲ್ಲಿ ಎಂದು ಹುಡುಕಬೇಕು ಎಂದು ಕುಮಾರಸ್ವಾಮಿ ಟೀಕಿಸಿದರು.

ಪ್ರವಾಸ: ಕೊರೋನ ಹಿನ್ನೆಲೆಯಲ್ಲಿ ಒಂದು ವರ್ಷ ರಾಜ್ಯ ಪ್ರವಾಸ ಕೈಗೊಂಡಿರಲಿಲ್ಲ. ಹೀಗಾಗಿ ಈ ತಿಂಗಳ ಅಂತ್ಯದಿಂದ ರಾಜ್ಯ ಪ್ರವಾಸ ಆರಂಭಿಸಲಾಗುತ್ತಿದ್ದು, ಮೂರು ಜಿಲ್ಲೆ ಪ್ರವಾಸ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News