ಅಮೆರಿಕಾ ಸಂಸತ್‌ ದಾಳಿಯ ವೇಳೆ ಸ್ಪೀಕರ್‌ ರ ಲ್ಯಾಪ್ ಟಾಪ್ ಕದ್ದ ಮಹಿಳೆಯ ಬಂಧನ

Update: 2021-01-19 07:02 GMT

ವಾಷಿಂಗ್ಟನ್,ಜ.19: ಜನವರಿ 6ರಂದು ಅಮೆರಿಕಾದ ಸಂಸತ್ ಕಟ್ಟಡ ಕ್ಯಾಪಿಟೊಲ್ ಹಿಲ್ ಮೇಲೆ ನಿರ್ಗಮನ ಅಧ್ಯಕ್ಷ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆ ವೇಳೆ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರ ಕಚೇರಿಯಿಂದ  ಲ್ಯಾಪ್ ಟಾಪ್ ಅಥವಾ ಹಾರ್ಡ್ ಡ್ರೈವ್ ಕದ್ದ ಆರೋಪದ ಮೇಲೆ ಪೊಲೀಸರು ರೈಲಿ ಜೂನ್ ವಿಲಿಯಮ್ಸ್ ಎಂಬ ಮಹಿಳೆಯನ್ನು ಸೋಮವಾರ ಬಂಧಿಸಿದ್ದಾರೆ. ಆಕೆ  ಲ್ಯಾಪ್ ಟಾಪ್ ಅಥವಾ ಹಾರ್ಡ್ ಡ್ರೈವ್ ಕದ್ದಿರುವ ಬಗ್ಗೆ ಆಕೆಯ ಮಾಜಿ ಪ್ರಿಯಕರ ನೀಡಿದ ಮಾಹಿತಿಯಂತೆ ಈ ಬಂಧನ ನಡೆದಿದೆ ಎಂದು  ಪೊಲೀಸರು ಹೇಳಿದ್ದಾರೆ.

ಆರೋಪಿ ಮಹಿಳೆಯನ್ನು ಆಕೆಯ ತವರು ರಾಜ್ಯ ಪೆನ್ಸಿಲ್ವೇನಿಯಾದಿಂದ ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

ಆರೋಪಿ ಮಹಿಳೆಯ ಮಾಜಿ ಪ್ರಿಯಕರ  ತನಿಖೆಯ ವೇಳೆ ಎಫ್‍ಬಿಐ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು ವಿಲಿಯಮ್ಸ್ ಳ ಕೆಲ ಸ್ನೇಹಿತರು ಆಕೆ ಪೆಲೋಸಿ ಕಚೇರಿಯಲ್ಲಿ ಕಳ್ಳತನ ನಡೆಸಿರುವ ವೀಡಿಯೋ ತೋರಿಸಿದ್ದರು ಹಾಗೂ ಆಕೆ ಕದ್ದ ಸಾಧನವನ್ನು ರಷ್ಯಾದಲ್ಲಿರುವ ಸ್ನೇಹಿತನಿಗೆ ಕಳುಹಿಸುವ ಉದ್ದೇಶ ಹೊಂದಿದ್ದಳು ಹಾಗೂ ಆಕೆಯ ರಷ್ಯಾ ಸ್ನೇಹಿತ ಅದನ್ನು ರಷ್ಯಾದ ವಿದೇಶಿ ಗುಪ್ತಚರ ಸಂಸ್ಥೆ ಎಸ್‍ವಿಆರ್‍ಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎಂದು  ತಿಳಿಸಿದ್ದಾನೆನ್ನಲಾಗಿದೆ. ದಾಖಲೆಗಳಲ್ಲಿ ಮಹಿಳೆಯ ಮಾಜಿ ಪ್ರಿಯಕರನನ್ನು ಡಬ್ಲ್ಯು1 ಎಂದು ಗುರುತಿಸಲಾಗಿದೆ.

ಮಹಿಳೆ ಕದ್ದ ಸಾಧನ ಈಗಲೂ ಆಕೆಯ ಬಳಿ ಇರಬಹುದು ಅಥವಾ ಆಕೆ ಅದನ್ನು ನಾಶಪಡಿಸಿರಬಹುದು ಎಂದು ಎಫ್‍ಬಿಐ ಹೇಳಿದೆ. ಯುಟ್ಯೂಬ್‍ನಲ್ಲಿ ಐಟಿವಿ ನ್ಯೂಸ್ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಹಸಿರು ಟಿ ಶರ್ಟ್ ಹಾಗೂ ಕಂದು ಕೋಟ್ ಧರಿಸಿ ಝೀಬ್ರಾ ಪ್ರಿಂಟ್ ಬ್ಯಾಗ್ ಹಿಡಿದುಕೊಂಡು ಆರೋಪಿ ಮಹಿಳೆ ಪೆಲೊಸಿ ಕಚೇರಿಯ ಮೆಟ್ಟಿಲುಗಳಲ್ಲಿ ನಿಂತವರನ್ನು ಮೇಲೆ ಹೋಗುವಂತೆ ಸೂಚಿಸುತ್ತಿರುವುದು ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News