ಜನರಿಂದ ತಿರಸ್ಕರಿಸಲ್ಪಟ್ಟವರನ್ನು ಮಂತ್ರಿ ಮಾಡಲಾಗಿದೆ: ಶಾಸಕ ಎಂ.ಪಿ.ರೇಣುಕಾಚಾರ್ಯ

Update: 2021-01-19 13:42 GMT

ಹೊಸದಿಲ್ಲಿ, ಜ.19: ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟಿರುವವರನ್ನು ರಾಜ್ಯದಲ್ಲಿ ಮಂತ್ರಿ ಮಾಡಲಾಗಿದೆ. ಪಕ್ಷದಲ್ಲಿ ನನಗಿಂತ ಹಿರಿಯರು ಇದ್ದಾರೆ. ಅಂತಹವರಿಗೆ ಅವಕಾಶ ಮಾಡಿಕೊಡಬೇಕು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡಿರುವ ಕುರಿತು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.

ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರ ಜೊತೆ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ ಮಾಡಿದ್ದರು ಎಂದರು.

ಯಡಿಯೂರಪ್ಪ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ವಿರುದ್ಧ ನಾನು ಮಾತನಾಡುವುದಿಲ್ಲ. ಆದರೆ, ಜನರಿಂದ ತಿರಸ್ಕರಿಸಲ್ಪಟ್ಟಿರುವವರಿಗೆ ಮಂತ್ರಿ ಸ್ಥಾನ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಬೆಂಗಳೂರಿಗೆ ಹಿಂದಿರುಗಿದ ಬಳಿಕ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ಹೇಳಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಗೌಡ ಪಾಟೀಲ್‍ರನ್ನು ಕಣಕ್ಕಿಳಿಸುವ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಬಿಜೆಪಿ ಆಲದ ಮರ ಇದ್ದಂತೆ, ಬಹಳಷ್ಟು ಪ್ರಬಲವಾಗಿದೆ ಎಂದರು.

ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು. ಅವರು ಬಯಸಿದ ಖಾತೆಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗಲಿ. ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡುವುದು ಬೇಡ ಎಂದ ಅವರು, ಇದೇ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಬಸವರಾಜ ಬೊಮ್ಮಾಯಿ ತಮ್ಮ ದಿಲ್ಲಿ ಭೇಟಿ ಕುರಿತು ನೀಡಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News