ಆರೋಪಿ ಪರ ವಕಾಲತ್ತು ವಹಿಸದಂತೆ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಬೇಸರ

Update: 2021-01-19 14:20 GMT

ಬೆಂಗಳೂರು, ಜ.19: ಜೆಎನ್‍ಯು ಯುನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ ಖಂಡಿಸಿ ಮೈಸೂರು ವಿವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಮಂಗಳವಾರ ಬೇಸರ ವ್ಯಕ್ತಪಡಿಸಿದೆ.  

ಈ ಕುರಿತು ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ವಿಚಾರಣೆ ವೇಳೆ ಮೈಸೂರು ವಕೀಲರ ಸಂಘದ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಆರೋಪಿ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವ ಅಧಿಕಾರ ಸಂಘಕ್ಕೆ ಸಿಕ್ಕಿದ್ದು ಹೇಗೆ. ಯಾವ ಕಾನೂನಿನ ಅಡಿಯಲ್ಲಿ ಇಂಥ ನಿರ್ಣಯ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ವಕೀಲರು ಈ ಕುರಿತು ಸಂಘದಿಂದ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ತಿಳಿಸಿದರು. ಮತ್ತೆ ಪ್ರಶ್ನಿಸಿದ ಪೀಠ, ವಕೀಲರಾಗಿರುವ ನೀವು ಕೂಡ ಓರ್ವ ಕೋರ್ಟ್ ಅಧಿಕಾರಿ. ಆರೋಪಿ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವುದು ಸರಿಯೇ ಎಂದಿತು. ಅಲ್ಲದೇ, ವಕೀಲರ ಸಂಘಗಳು ಇಂಥ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಹೀಗಾಗಿ, ಇಂಥ ಕ್ರಮಗಳನ್ನು ನಿಯಂತ್ರಿಸಲು ಭಾರತೀಯ ವಕೀಲರ ಪರಿಷತ್ತು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟು, ಫೆ.12 ರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು.

ಜೆಎನ್‍ಯು ಯುನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ ಖಂಡಿಸಿ ಮೈಸೂರು ವಿವಿ ಆವರಣದಲ್ಲಿ 2020ರ ಜ.8ರಂದು ಪ್ರತಿಭಟನೆ ನಡೆದಿತ್ತು. ಈ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ನಳಿನಿ ಬಾಲಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಳಿನಿ ಪರ ಯಾರೊಬ್ಬ ವಕೀಲರೂ ವಕಾಲತ್ತು ವಹಿಸಬಾರದೆಂದು ಜ. 16ರಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News