ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಡಿ ದರ್ಜೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

Update: 2021-01-19 14:53 GMT

ಚಿಕ್ಕಮಗಳೂರು, ಜ.19: ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ "ಡಿ" ದರ್ಜೆ ನೌಕರರು ಪ್ರಾಣದ ಹಂಗು ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ಆದರೆ ಸರಕಾರ ನೌಕರರಿಗೆ ವೇತನ ನೀಡದೇ ದುಡಿಸಿಕೊಳ್ಳುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ನೌಕರರ ವೇತನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಜಿಲ್ಲಾಸ್ಪತ್ರೆಯ ನೌಕರರು ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಮಂಗಳವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಜಿಲ್ಲಾಸ್ಪತ್ರೆಯ ಡಿ ದರ್ಜೆ ನೌಕರರು ಕಳೆದ ನಾಲ್ಕು ತಿಂಗಳುಗಳಿಂದ ವೇತನ ಬಿಡುಗಡೆ ಮಾಡದ ಸರಕಾರ ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಪುಗುಸಟ್ಟೆ ಕೆಲಸ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಸರಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಧರಣಿ ಉದ್ದೇಶಿಸಿ ಮಾತನಾಡಿದ ನೌಕರರು, ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡಲು ಇತರ ಸಿಬ್ಬಂದಿ ಜೀವಭಯದಿಂದ ಹಿಂದೇಟು ಹಾಕುತ್ತಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿಯಲ್ಲಿ ಕೆಲಸ ಮಾಡುವ ಡಿ ದರ್ಜೆ ನೌಕರರು ಪ್ರಾಣಭೀತಿ ಇಲ್ಲದೇ ಕೆಲಸ ಮಾಡುತ್ತಾ ಬಂದಿದ್ದಾರೆ. ಸರಕಾರ ನಮ್ಮನ್ನು ಕೊರೋನ ವಾರಿಯರ್ಸ್ ಎಂದು ಕರೆಯುತ್ತಾ, ಸನ್ಮಾನ ಮಾಡುತ್ತಾ ಕೇವಲ ಗೌರವ ನೀಡುತ್ತಿದೆಯೇ ಹೊರತು ನೌಕರರು ನೆಮ್ಮದಿಯಿಂದ ಜೀವನ ನಡೆಸಲು ಅಗತ್ಯವಾಗಿರುವ ವೇತನವನ್ನು ಬಿಡುಗಡೆ ಮಾಡುತ್ತಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸರಕಾರ ನೌಕರರ ವೇತನ ಬಿಡುಗಡೆ ಮಾಡಿರುವುದರಿಂದ ಡಿ ದರ್ಜೆ ನೌಕರರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಸಾಲಸೂಲ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದು ಅಳಲು ಹೇಳಿಕೊಂಡರು.

ವೇತನ ಬಿಡುಗಡೆಗೆ ಆಗ್ರಹಿಸಿ ಇತ್ತೀಚೆಗೆ ಜಿಲ್ಲಾ ಸರ್ಜನ್ ಡಾ.ಮೋಹನ್‍ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಮನವಿ ಸ್ವೀಕರಿಸಿದ ಸರ್ಜನ್, ಮುಂದಿನ 8 ದಿನಗಳ ಒಳಗೆ ಬಾಕಿ ವೇತನ ಪಾವತಿಸುವ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ವೇತನ ಬಿಡುಗಡೆಯಾಗಿಲ್ಲ. ವೇತನ ಇಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಡಿ ದರ್ಜೆ ನೌಕರರ ಬದುಕು ಬೀದಿಗೆ ಬಂದಿದೆ. ನಮ್ಮ ಸಮಸ್ಯೆ ಹೇಳಿಕೊಂಡಾಗಲೆಲ್ಲ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ವೇತನ ಬಿಡುಗಡೆಗೆ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ವೇತನ ಬಿಡುಗಡೆಯಾಗದಿರುವುದರಿಂದ ನಮಗೆ ಇನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಈ ಕಾರಣಕ್ಕೆ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೇವೆ. ಸರಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಶೀಘ್ರ ವೇತನ ಬಿಡುಗಡೆಗೆ ಕ್ರಮವಹಿಸಬೇಕು. ವೇತನ ಬಿಡುಗಡೆಯಾಗುವವರೆಗೂ ಧರಣಿಯನ್ನು ಮುಂದುವರಿಯುತ್ತದೆ ಎಂದು ನೌಕರರು ಇದೇ ವೇಳೆ ಎಚ್ಚರಿಸಿದರು.

ಧರಣಿ ವೇಳೆ ನೌಕರರು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಈ ಸಂಬಂಧದ ಮನವಿಯನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News