ಮೈಸೂರು: ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ರೈತರ ತರಾಟೆ

Update: 2021-01-19 17:27 GMT

ಮೈಸೂರು, ಜ.19: "ಭತ್ತವನ್ನು ಯಾವಾಗ ನಾಟಿ ಮಾಡುತ್ತಾರೆ ಎಂಬ ಸಾಮಾನ್ಯ ಜ್ಞಾನ ಸರಕಾರಕ್ಕೆ ಇಲ್ಲ. ಲಕ್ಷಾಂತರ ಎಕರೆಯಲ್ಲಿ ಜ್ಯೋತಿ ಭತ್ತ ಬೆಳೆದರೂ ಖರೀದಿ ಕೇಂದ್ರ ತೆರೆದಿಲ್ಲ. ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು. ಸರಕಾರ ನಡೆಸಲು ಆಗದಿದ್ದರೆ ಬಿಟ್ಟು ತೊಲಗಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಮಂಗಳವಾರ ಭೇಟಿ ಮಾಡಲು ಬಂದ ರೈತರು, ಇಷ್ಟು ದಿನ ಕಳೆದರೂ ಜ್ಯೋತಿ ಭತ್ತ ಖರೀದಿಸಲು ಸರಕಾರಕ್ಕೆ ಜವಾಬ್ದಾರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರಕಾರಕ್ಕೆ ಜವಾಬ್ದಾರಿ ಇಲ್ಲ ಎನ್ನುವುದು ಸರಿಯಲ್ಲ, ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದರಿಂದ ಮತ್ತಷ್ಟು ಕುಪಿತಗೊಂಡ ರೈತರು ಕೃಷಿ ಸಚಿವರು ಮತ್ತು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಹೊಸಕೋಟೆ ಬಸವರಾಜು, ಇನ್ನೂ ಪರಿಶೀಲಿಸುತ್ತೇನೆ ಎಂದರೆ ಏನು ಅರ್ಥ? ನಾವು ಬಾಯಿ ಮುಚ್ಚಿಕೊಂಡು ನಿಂತುಕೊಳ್ಳಬೇಕಾ? ಇದು ಒಬ್ಬ ಸಚಿವರು ನೀಡುವ ಹೇಳಿಕೆಯಲ್ಲ. ನೀವೇನೂ ಆಕಾಶದಿಂದ ಉದುರಿ ಬಂದಿಲ್ಲ, ನೀವು ಮಜಾ ಮಾಡುತ್ತಿರುವುದೆಲ್ಲ ನಮ್ಮ ರೈತರ ಹಣದಿಂದ, ನಿಮ್ಮ ಕೈಯಲ್ಲಿ ಅಧಿಕಾರ ನಡೆಸಲು ಆಗದಿದ್ದರೆ ಇಲ್ಲಿಂದ ತೊಲಗಿ ಎಂದು ಗುಡುಗಿದರು.

ಮೈಸೂರು ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ಜ್ಯೋತಿ ಭತ್ತ ಬೆಳೆಯಲಾಗಿದೆ. ಜ್ಯೋತಿ ಭತ್ತ ಬೆಳೆದು ನಾಲ್ಕು ತಿಂಗಳುಗಳಾದರೂ ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಖರೀದಿ ಕೇಂದ್ರಗಳಲ್ಲೂ ಜ್ಯೋತಿ ಭತ್ತವನ್ನು ಖರೀದಿ ಮಾಡುತ್ತಿಲ್ಲ, ಹಾಗಿದ್ದ ಮೇಲೆ ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಜ್ಯೋತಿ ಭತ್ತಖರೀದಿ ಮಾಡುವಂತೆ ಒಂದು ತಿಂಗಳ ಹಿಂದೆಯೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿತ್ತು. ಆದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಈ ಸಂಬಂಧ ಡಿಸೆಂಬರ್‌ನಲ್ಲೇ ಖರೀದಿ ಮಾಡಬೇಕಿತ್ತು. ಫೆಬ್ರವರಿ ತಿಂಗಳು ಬರುತ್ತಿದ್ದರೂ ಇನ್ನೂ ಖರೀದಿ ಮಾಡಿಲ್ಲ ಎಂದು ಕಿಡಿಕಾರಿದರು.

ಕೃಷಿ ಸಚಿವರಾದ ನಿಮಗೆ ಇದೂವರೆಗೂ ಮಾಹಿತಿ ಇಲ್ಲ ಎಂದರೆ ಹೇಗೆ, ನೀವು ಕಂಡಕಂಡಲ್ಲಿ ಹಸಿರು ಟವಲ್ ಹಾಕಿಕೊಂಡು ಮೆರೆಯುವುದಲ್ಲ, ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು, ಇಲ್ಲದಿಂದರೆ ಸರ್ಕಾರದ ವಿರುದ್ಧ ಮತ್ತು ಸಚಿವರುಗಳು ಕಂಡಕಂಡಲ್ಲಿ ಘೇರಾವ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಿ.ಮರಂಕಯ್ಯ, ಬೊಕ್ಕಳ್ಳೀ ನಂಜುಂಡಸ್ವಾಮಿ, ಕರುಣಾಕರ್, ಸಿದ್ದಪ್ಪ, ಹೊಸೂರು ಕುಮಾರ್, ನೇತ್ರಾವತಿ, ಚಂದ್ರೇಗೌಡ, ಕೊರಟ್ಟಿಚಿನ್ನಸ್ವಾಮಿ, ವಿಜಯೇಂದ್ರ ಆನಂದ್ ಪ್ರಭಾರಕರ್, ಮಂಡಕಳ್ಳಿ ಮಹೇಶ್, ಬೆಂಕಿಪುರ ಚಿಕ್ಕಣ್ಣ, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ದಿಲ್ಲಿಯಲ್ಲಿ ರೈತರು 57 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿರುವ ನಿಮ್ಮ ಸಚಿವರಿಗೆ ಅವರ ಬಳಿ ಹೋಗಿ ಸಮಸ್ಯೆ ಕೇಳುವ ಪರಿಜ್ಞಾನ ಇಲ್ಲ. ದಯವಿಟ್ಟು ಅರ್ಥಮಾಡಿಕೊಂಡು ಸರಕಾರ ನಡೆಸಿ, ಹಸಿರು ಟವಲ್ ಹಾಕಿಕೊಂಡು ರೈತರ ಮಾನ ಮರ್ಯಾದೆ ಕಳೆಯುತ್ತಿದ್ದೀರಿ, ನಿಮಗೆ ನಾಚಿಕೆಯಾಗಬೇಕು. 

- ಹೊಸಕೋಟೆ ಬಸವರಾಜು, ರೈತ ಮುಖಂಡ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News