‘ರಾಮ ಮಂದಿರ ಏಕೆ ಬೇಡ?’ ಪುಸ್ತಕ ಖರೀದಿಯ ಪ್ರಮೇಯವೆ ಉದ್ಭವವಾಗಿಲ್ಲ: ಡಾ.ದೊಡ್ಡರಂಗೇಗೌಡ

Update: 2021-01-19 17:03 GMT

ಬೆಂಗಳೂರು, ಜ.19: 2018ರಲ್ಲಿ ವಿವಿಧ ಲೇಖಕರಿಂದ ಹಾಗೂ ಪ್ರಕಾಶಕರಿಂದ ತಮ್ಮ ತಮ್ಮ ಕೃತಿಗಳನ್ನು ಕೊಳ್ಳಲು ಗ್ರಂಥಾಲಯ ಇಲಾಖೆಗೆ 10,571 ಕೃತಿಗಳು ಸ್ವೀಕೃತವಾಗಿತ್ತು. ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸರ್ವ ಸದಸ್ಯರು, 2020ರ ಸೆ.7, 8, 9, 29, 30, ಅ.12, 14, ನ.11 ಹಾಗೂ ಡಿ.1ರವರೆಗೆ ಎಲ್ಲ ಪುಸ್ತಕಗಳನ್ನು ಪರಿಶೀಲಿಸಿ ಸ್ವೀಕೃತವಾದ 10,571 ಪುಸ್ತಕಗಳ ಪೈಕಿ 5109 ಪುಸ್ತಕಗಳನ್ನು ಸಮಿತಿ ಆಯ್ಕೆ ಮಾಡಿತು ಎಂದು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ತಿಳಿಸಿದ್ದಾರೆ.

ಆಯ್ಕೆಯಾಗದ ಪುಸ್ತಕ ಪ್ರಕಾಶಕರು ಮತ್ತು ಲೇಖಕರು ತಮ್ಮ ಪುಸ್ತಕಗಳನ್ನು ಮರುಪರಿಶೀಲಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರಿಂದ ಪುನಃ ಪುಸ್ತಕ ಆಯ್ಕೆ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಡಿ.10ರಂದು ಆಯೋಜಿಸಿ ಒಂದು ದಿನ ಪೂರ್ತಿ ಎಲ್ಲ ಕೃತಿಗಳನ್ನು ಪರಿಶೀಲಿಸಿ ಕೆಲವು ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು. ಆ ಸಂದರ್ಭದಲ್ಲಿ ಗದಗಿನ ಲಡಾಯಿ ಪ್ರಕಾಶನದವರು ಪ್ರಕಟಿಸಿದ ಕೆ.ಎಸ್.ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಎಂಬ ಕೃತಿ ಮರುಪರಿಶೀಲನೆಗೆ ಸ್ವೀಕೃತವಾಗಿತ್ತು ಎಂದು ಅವರು ಹೇಳಿದ್ದಾರೆ.

ಹಿಂದಿನ ಸಭೆಗಳಲ್ಲಿ ಈ ಕೃತಿ ಪರಿಶೀಲನೆಗೆ ಬಂದಾಗ ‘ವಿವಾದಗ್ರಸ್ತ ಕೃತಿ’ ಎಂದು ಪರಿಗಣಿಸಿ ಆಯ್ಕೆಯಾಗಿರಲಿಲ್ಲ. ಮರುಪರಿಶೀಲನೆಯ ಸಂದರ್ಭದಲ್ಲಿ ‘ಇದು ಬಹುಸಂಖ್ಯಾತ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ’ ಎಂಬ ವಿಷಯವನ್ನು ಚರ್ಚಿಸಲಾಯಿತಾದರೂ ಓದಿನ ವೈವಿಧ್ಯತೆಗಾಗಿ ಇದು ಒಂದು ಕೃತಿ ಗ್ರಂಥಾಲಯಗಳಲ್ಲಿ ಇರಬಹುದೆಂದು ಸಮಿತಿಯ ಸದಸ್ಯರೆಲ್ಲರ ನಿರ್ಣಯದಂತೆ ಆಯ್ಕೆ ಮಾಡಲಾಯಿತು. ಈ ಪುಸ್ತಕವು 2018ನೆ ಸಾಲಿನ ಆಯ್ಕೆ ಪಟ್ಟಿಯಲ್ಲಿ 4062ನೆ ಸಂಖ್ಯೆಯಲ್ಲಿದ್ದು, ಆ ಸಾಲಿನ 5109 ಪುಸ್ತಕಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲು ಶಿಫಾರಸ್ಸು ಮಾಡಿತು ಎಂದು ಅವರು ತಿಳಿಸಿದ್ದಾರೆ.

ಈ ಪುಸ್ತಕಗಳ ಪಟ್ಟಿಯಲ್ಲಿ ಮೊದಲ 350 ಪುಸ್ತಕಗಳನ್ನು ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಅನುದಾನದಲ್ಲಿ ತಲಾ 300 ಪ್ರತಿಗಳನ್ನು ಖರೀದಿಸಲು ಗ್ರಂಥಾಲಯ ಇಲಾಖೆ ಕ್ರಮ ತೆಗೆದುಕೊಂಡಿದೆ. ಉಳಿದ ಯಾವುದೆ ಪುಸ್ತಕಗಳು ಸರಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಖರೀದಿಯಾಗಿಲ್ಲ. ಹಾಗಾಗಿ 4062 ಕ್ರಮ ಸಂಖ್ಯೆಯಲ್ಲಿರುವ ಈ ಪುಸ್ತಕವನ್ನು ಖರೀದಿಸುವ ಪ್ರಮೇಯವೆ ಉದ್ಧವವಾಗಿಲ್ಲ ಎಂದು ದೊಡ್ಡರಂಗೇಗೌಡ ಸ್ಪಷ್ಟಣೆ ನೀಡಿದ್ದಾರೆ.

ಸಾರ್ವಜನಿಕ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯು ಈ ಬಗ್ಗೆ ಕೂಲಂಕಷ ಚರ್ಚೆ ನಡೆಸಿದ ನಂತರ ಕೆ.ಎಸ್.ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಎಂಬ ಕೃತಿಯನ್ನು 2018ನೆ ಸಾಲಿನ ಆಯ್ಕೆ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಿದೆ. ಸರಕಾರದ ಅನುಮೋದನೆಯನ್ನು ನಿರೀಕ್ಷಿಸಿ ಈ ಶೀರ್ಷಿಕೆಯ ಪುಸ್ತಕವನ್ನು ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯು ಹಿಂಪಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News