ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ: ರಾಜ್ಯ ಪ್ರಾಂತ ರೈತ ಸಂಘ

Update: 2021-01-19 17:19 GMT

ಬೆಂಗಳೂರು, ಜ.19: ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ, ರಾಜ್ಯದ ಹಾಲಿ ಅಭಿವೃದ್ಧಿಯನ್ನು ಸರ್ವನಾಶ ಮಾಡುವ ಜಾನುವಾರು ಹತ್ಯಾ ನಿಷೇದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ದುರ್ನಡೆಯನ್ನು ತಕ್ಷಣವೇ ನಿಲ್ಲಿಸಿರಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸಿದೆ.

ಇದು, ರಾಜ್ಯದಲ್ಲಿ ಈಗಾಗಲೆ ಬದುಕನ್ನ ರೂಪಿಸಿಕೊಂಡಿರುವ ಕೋಟ್ಯಂತರ ಕುಟುಂಬಗಳ ಮೇಲಿನ ಗದಾಪ್ರಹಾರವಾಗಿದೆ. ಹೈನುಗಾರಿಕೆ, ಹೈನೋದ್ಯಮ ಮತ್ತು ಮಾಂಸೋದ್ಯಮ, ಚರ್ಮೋದ್ಯಮ, ಔಷಧಿಯ ಉದ್ಯಮದ ವಿರೋಧಿಯಾಗಿದೆ ಮಾತ್ರವಲ್ಲ, ದಲಿತರ ಹಾಗೂ ಅಲ್ಪಸಂಖ್ಯಾತರ ವಿರೋಧಿ ನಡೆಯಾಗಿದೆ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಕಿಡಿಗಾರಿದ್ದಾರೆ. 

ಈ ಎಲ್ಲ ಉದ್ಯಮಗಳನ್ನು ಮತ್ತು ಹೈನೋದ್ಯಮದ ಸಹಕಾರ ಸಂಘಗಳ ಹಾಗೂ ರಾಜ್ಯದ ಪ್ರತಿಷ್ಠಿತ ಕರ್ನಾಟಕ ಹಾಲು ಒಕ್ಕೂಟವನ್ನು ಸರ್ವನಾಶ ಮಾಡಲಿದೆ. ಈ ಎಲ್ಲ ಉದ್ಯಮಗಳಲ್ಲಿ ತೊಡಗಿಸಿಕೊಂಡ ದಶಲಕ್ಷಾಂತರ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಲಕ್ಷಾಂತರ ಈ ಉದ್ದಿಮೆಗಳ ಸಣ್ಣ, ಮದ್ಯಮ ವ್ಯಾಪಾರಸ್ಥರು ಬೀದಿ ಪಾಲಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರ ಮುಖ್ಯ ಕಸುಬಾದ ಬೇಸಾಯದ ಮೇಲೆ ಅದಾಗಲೇ ಕಾರ್ಪೋರೇಟ್ ಕೃಷಿ ಕಾಯ್ದೆಗಳನ್ನು ಹೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಬಲವಾದ ಪ್ರಹಾರಕ್ಕೆ ಮುಂದಾಗಿರುವಾಗಲೇ, ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಉಪಕಸುಬಾದ ಹೈನುಗಾರಿಕೆಯು ಈಗಾಗಲೆ ಅದು ನಷ್ಟದಲ್ಲಿರುವಾಗ, 13 ವರ್ಷಗಳವರೆಗೆ ನಿರುಪಯುಕ್ತ ಜಾನುವಾರುಗಳನ್ನು ಸಾಕಲೇಬೇಕೆಂಬ ಮತ್ತಷ್ಟು ಹೊರೆಯನ್ನು ಹೇರುವ ಮೂಲಕ ಅದರ ಮೇಲೆ ಅಂತಿಮ ಪ್ರಹಾರ ನಡೆಸಿದ್ದಾರೆ. ಇದರಿಂದ 50 ಲಕ್ಷಕ್ಕೂ ಅಧಿಕ ಹೈನುಗಾರ ಕುಟುಂಬಗಳು ಉದ್ಯೋಗ ಭದ್ರತೆಯನ್ನು ಕಳೆದುಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಇದು ಜನತೆಯ ಆಹಾರದ ಹಾಗೂ ಉದ್ಯೋಗದ ಮತ್ತು ಬದುಕುವ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಗಂಭೀರ ದಾಳಿಯಾಗಿದೆ. ಜನತೆಯ ಜಾತ್ಯತೀತ ಹಾಗೂ ಜನಪದ ಸಂಸ್ಕೃತಿಯ ಮೇಲಿನ ದಾಳಿಯೂ ಇದಾಗಿದೆ. ಕೋಮು ಹಾಗೂ ಜಾತಿ ತಾರತಮ್ಯದ ವ್ಯಾದಿಯನ್ನು ಬಲಪಡಿಸಲಿದೆ. ಈ ಎಲ್ಲ ಉದ್ದಿಮೆಗಳನ್ನು ಹಾಗೂ ಹೈನುಗಾರಿಕೆಯನ್ನು, ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುವ ಮತ್ತು ಜನತೆಯನ್ನು ಒಡೆದಾಳುವ ಗುಲಾಮ ನೀತಿಯಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಜಾನುವಾರು ಸಂರಕ್ಷಣೆಯ ಯಾವುದೇ ಅಂಶಗಳಿಲ್ಲ, ಹಾಗೆ ಹೇಳುವುದು ಗೋಸುಂಬೆ ರಾಜಕಾರಣವಾಗಿದೆ. ಅಲ್ಲದೆ, ಕೂಡಲೇ ಆ ದುರ್ನಡೆಯನ್ನು ಕೈ ಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಸುಗ್ರೀವಾಜ್ಞೆಯು, ಉಂಟು ಮಾಡುವ ತೀವ್ರ ಹಾನಿಯಿಂದ ಜನತೆಯನ್ನು ಮತ್ತು ಜನರ ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಯಾವುದೇ ಅಂಶಗಳನ್ನು ಇದು ಪರಿಗಣಿಸಿಲ್ಲ. ಇದು ತಕ್ಷಣದಿಂದಲೇ ನಿರುಪಯುಕ್ತ ಜಾನುವಾರು ಮಾರಾಟ ಮಾಡುವ ಹೈನುಗಾರರ ಮೇಲೆ, ಖರೀದಿಸುವ ಖುರೇಷಿಗಳ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಕ್ರಿಮಿನಲ್ ದಾಳಿ ಎಸಗಲು ಅವಕಾಶ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಎಲ್ಲ ಹಾನಿಗಳಿಂದ ಜನತೆಯನ್ನು ಸಂರಕ್ಷಿಸುವ ಪರಿಹಾರೋಪಾಯಗಳನ್ನು ಮತ್ತು ನಿರುದ್ಯೋಗದ ಪುನರ್ವಸತಿ ಯೋಜನೆಗಳನ್ನು ಪೂರ್ವಭಾವಿಯಾಗಿ ಕೈಗೊಳ್ಳದೆ ಮತ್ತು ವ್ಯಾಪಕವಾಗಿ ಚರ್ಚೆಗೀಡುಮಾಡದೆ ಯಾವುದೇ ಕಾರಣಕ್ಕೆ ಇದನ್ನು ಜಾರಿಗೆ ತರಬಾರದು ಮತ್ತು ಅದರ ತುರ್ತು ಈಗ ಇಲ್ಲವೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News