ಬಿಜೆಪಿ ನಾಯಕರಿಗೆ ಅಮಿತ್ ಶಾ ಮುಂದೆ ಮಾತನಾಡುವ ಧೈರ್ಯವಿಲ್ಲ: ಬಂಡೆಪ್ಪ ಕಾಶೆಂಪೂರ್

Update: 2021-01-19 17:57 GMT

ಬೆಂಗಳೂರು, ಜ.19: ರಾಜ್ಯದ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ನಿಂತು ಮಾತನಾಡುವಷ್ಟು ಧೈರ್ಯವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡವೆ ಆಡಳಿತ ಭಾಷೆ. ಕೇಂದ್ರ ಗೃಹ ಸಚಿವರ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಇರಬಹುದು. ಆದರೆ, ಕನ್ನಡವನ್ನು ಬಳಕೆ ಮಾಡಬಾರದು ಎಂಬ ನಿಯಮವೇನು ಇಲ್ಲವಲ್ಲ. ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ರಾಜ್ಯ ಸರಕಾರ ಕನ್ನಡ ಬಗ್ಗೆ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿತ್ತು ಎಂದರು.

ತಮಿಳುನಾಡಿಗೆ ಹೋದರೆ ಅಲ್ಲಿ ಬೇರೆ ಭಾಷೆಗಳ ಬಳಕೆಯಿದ್ದರೂ ತಮಿಳು ಭಾಷೆಯನ್ನೆ ಆದ್ಯತೆ ಮೇರೆಗೆ ಬಳಸಲಾಗುತ್ತೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಕನ್ನಡಪ್ರೇಮವನ್ನು ಪ್ರದರ್ಶಿಸಬೇಕಿತ್ತು. ಆದರೆ, ಸಂಪೂರ್ಣವಾಗಿ ಕನ್ನಡವನ್ನು ಆ ಕಾರ್ಯಕ್ರಮದಲ್ಲಿ ಕಡೆಗಣಿಸಿದ್ದು ಖಂಡನೀಯ ಎಂದು ಅವರು ಹೇಳಿದರು.

ಜೆಡಿಎಸ್ ವೀಕ್ಷಕರ ತಂಡದಿಂದ ಜಿ.ಟಿ.ದೇವೇಗೌಡ ಹಾಗೂ ಮಧು ಬಂಗಾರಪ್ಪರನ್ನು ಕೈ ಬಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಸಂಘಟನೆಗಾಗಿ ಅಷ್ಟೇ ವೀಕ್ಷಕರ ತಂಡಗಳನ್ನು ರಚನೆ ಮಾಡಲಾಗಿದೆ. ಹಾಗಾಗಿ ಆ ತಂಡದಲ್ಲಿ ಜಿ.ಟಿ.ದೇವೇಗೌಡ ಹಾಗೂ ಮಧು ಬಂಗಾರಪ್ಪ ಅವರನ್ನು ಸೇರಿಸಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಪಕ್ಷದಲ್ಲಿ ಇಲ್ಲ ಅಂತ ಅರ್ಥವಲ್ಲ. ಅವರೆಲ್ಲರೂ ಪಕ್ಷದಲ್ಲೇ ಇದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಅವರು ತಮ್ಮನ್ನು ಪಕ್ಷದಲ್ಲಿ ಇಲ್ಲ ಎಂದು ಹೇಳುತ್ತಿದ್ದರು. ಅವರೂ, ಜೆಡಿಎಸ್ ಸಭೆಗೆ ಬಂದಿರಲಿಲ್ಲವೇ? ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಕೆಲವು ಅಸಮಾಧಾನಗಳಿದ್ದು, ಅವುಗಳನ್ನೆಲ್ಲ ಕುಮಾರಸ್ವಾಮಿ ಬಗೆಹರಿಸುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News