ಆರು ಬಾರಿ ಶಾಸಕನಾದರೂ ಸಚಿವ ಸ್ಥಾನ ಸಿಕ್ಕಿಲ್ಲ: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಬೇಸರ

Update: 2021-01-19 18:03 GMT

ಬೆಂಗಳೂರು, ಜ.19: ನಾನು 1961ನೆ ಇಸವಿಯಿಂದ ರಾಜಕೀಯದಲ್ಲಿದ್ದೇನೆ. ಆರು ಬಾರಿ ಶಾಸಕನಾಗಿದ್ದೇನೆ. ನನಗೆ ಒಂದು ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆ. ಆದರೆ, ನನಗೆ ಅವಕಾಶ ಸಿಕ್ಕಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಪ್ರತಿ ಬಾರಿಯೂ ಈ ಹಿಂದೆ ಸಚಿವರಾದವರೆ ಅಧಿಕಾರ ಅನುಭವಿಸುತ್ತಿದ್ದಾರೆ. ಖಾತೆಗಳನ್ನು ನಿಭಾಯಿಸುವ ಶಕ್ತಿ ಇರುವಂತಹವರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ಮಾಡಿದಾಗ ಹೊಸಬರಿಗೆ, ಹಿರಿಯರಿಗೆ ಅವಕಾಶ ಕೊಟ್ಟರೆ, 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಮೂಲಕ 150 ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಸಂಬಂಧ ಕೋರ್ ಕಮಿಟಿ ಸಭೆ ನಡೆಸಿದ ಅವರು, ಯಾವ ಶಾಸಕರು ಯಾವುದೆ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದು ಸೂಚನೆ ನೀಡಿದ್ದಾರೆ. ಆದುದರಿಂದ, ನಾವು ಏನನ್ನೂ ಮಾತನಾಡುವುದಿಲ್ಲ. ಪಕ್ಷದ ಆದೇಶ ಮೀರಿ ಕೆಲಸ ಮಾಡುವವರಲ್ಲ ನಾವು. ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆಯಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಡಿ ಏನು ಅನ್ನೋದೆ ನನಗೆ ಗೊತ್ತಿಲ್ಲ. ಅದನ್ನು ಯಾವ ರೀತಿ ಬಳಸಬೇಕು ಅಂತಾನೂ ಗೊತ್ತಿಲ್ಲ. ನಾವು ಚಿತ್ರದುರ್ಗದವರು, ಸಿಡಿ ಬಗ್ಗೆಯಲ್ಲ ಗೊತ್ತಿಲ್ಲ. ಯಾರು ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News