ಹೊಸದಾಗಿ ಸಂಪುಟ ರಚನೆ ಮಾಡುವ ಅಗತ್ಯವಿದೆ: ಬಿಜೆಪಿ ಶಾಸಕ ಶಿವನಗೌಡ ನಾಯಕ್

Update: 2021-01-19 18:05 GMT

ಬೆಂಗಳೂರು, ಜ.19: ಇಪತ್ತು ತಿಂಗಳು ಸಚಿವರಾಗಿ ಅಧಿಕಾರ ನಡೆಸಿರುವ ಎಲ್ಲ ಸಚಿವರಿಂದ ರಾಜೀನಾಮೆ ಪಡೆದು, ಹೊಸದಾಗಿ 32 ಜನರನ್ನು ಸೇರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ರಚನೆ ಮಾಡುವುದು ಉತ್ತಮ ಎಂದು ಬಿಜೆಪಿ ಶಾಸಕ ಶಿವನಗೌಡ ನಾಯಕ್ ಸಲಹೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಿಂದ ಕೈ ಬಿಡುವವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು, ಹೊಸಬರಿಗೆ ಹಿರಿತನದ ಆಧಾರದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಎಲ್ಲ ಗೊಂದಲಗಳು ನಿವಾರಣೆಯಾಗಲಿವೆ ಎಂದರು.

ಪಕ್ಷ ನಿಷ್ಠೆ, ಪ್ರಾದೇಶಿಕ ಅಸಮಾನತೆ ನಿವಾರಣೆ ಹಾಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನ ನೀಡಬೇಕೆಂಬುದು ಎಲ್ಲ ಶಾಸಕರ ಆಗ್ರಹವಾಗಿದೆ. ಕೆಳ ಹಂತದಲ್ಲಿರುವ ನಾಯಕರಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಕೊಡಬೇಕು ಎಂದು ಶಿವನಗೌಡ ನಾಯಕ್ ಹೇಳಿದರು.

ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆಯುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಅಂತಹ ಯಾವುದೆ ಬೆಳವಣಿಗೆಗಳು ನಮ್ಮಲ್ಲಿ ನಡೆದಿಲ್ಲ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದಕ್ಕೆ ಕೆಲವರಲ್ಲಿ ಅಸಮಾಧಾನ ಇರುವುದು ನಿಜ. ಆದುದರಿಂದಲೆ, ಈಗಿರುವ ಎಲ್ಲ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಮೂಲಕ ಸಂಪುಟ ರಚನೆ ಮಾಡಿದರೆ ಎಲ್ಲವೂ ಸರಿಯಾಗುತ್ತೆ. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ನಾಯಕರು ಗಮನ ಹರಿಸಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News