ಪತ್ರಕರ್ತ ಸಂವಿಧಾನ ಮೌಲ್ಯಗಳನ್ನು ಅನುಸರಿಸಲಿ: ಶಿವಸುಂದರ್

Update: 2021-01-19 18:06 GMT

ಬೆಂಗಳೂರು, ಜ.19: ಪತ್ರಕರ್ತನಿಗೆ ಕೇವಲ ಪ್ರತಿಭೆ ಇದ್ದರೆ ಸಾಲದು, ಸತ್ಯಾನ್ವೇಷನೆ, ಜನಪರ ಚಿಂತನೆ ಹೊಂದುವುದು ಬಹಳ ಮುಖ್ಯವೆಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಹೇಳಿದ್ದಾರೆ.

ಮಂಗಳವಾರ ನಗರದ ಸರಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ನೂತನವಾಗಿ ಹೊರತರುತ್ತಿರುವ ಯುವ ಸಮಯ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಕರ್ತನು ಸಂವಿಧಾನ ಆಶಯಗಳನ್ನು ಅನುಸರಿಸಿದರೆ ಮಾತ್ರ ಸಮಾಜ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಬಹುದೆಂದು ತಿಳಿಸಿದ್ದಾರೆ.

ಸರಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿಯೇ ಯುವ ಸಮಯ ಮಾಸ ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳು ಕೇವಲ ಹೇಳಿಕೆಗಳನ್ನು ಮಾತ್ರ ನಂಬಿ ವರದಿಗಳನ್ನು ಪ್ರಕಟಿಸಬಾರದು. ಆ ಹೇಳಿಕೆ ಕುರಿತು ಪರಿಶೀಲಿಸಿ, ಅದರ ಸತ್ಯಾಸತ್ಯತೆಗಳನ್ನು ಅನ್ವೇಷಿಸಿ ಸುದ್ದಿಗಳನ್ನು ಮಾಡಬೇಕೆಂದು ಅವರು ಆಶಿಸಿದ್ದಾರೆ.

ಕೇಂದ್ರ ಸರಕಾರ ಹಸುವಿನ ಕುರಿತು ಮಾಹಿತಿ ನೀಡುವ ನೆಪದಲ್ಲಿ ವಿದ್ಯಾರ್ಥಿಗಳಿಗೆ ಮೌಢ್ಯವನ್ನು ಹರಡಲು ಮುಂದಾಗಿದೆ. ಇದಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ್ ಸ್ಥಾಪಿಸಿ, ಹಸುವಿನ ಕುರಿತು ಅಸಂಬದ್ಧವಾದ ಮಾಹಿತಿಯನ್ನು ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದರತ್ತ ದಾಪುಗಾಲು ಇಡಬೇಕೆಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ. ಸರಕಾರಿ ಕಲಾ ಕಾಲೇಜಿನ ಪತ್ರಿಕೋದ್ಯಮ ಪ್ರಾಧ್ಯಾಪಕ ಗೋವಿಂದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾವುದೇ ಲಸಿಕೆಯನ್ನು ಜನರ ಮೇಲೆ ಪ್ರಯೋಗ ಮಾಡುವ ಮೊದಲು ಮೂರು ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗ ಮಾಡಬೇಕಿರುತ್ತದೆ. ಈ ಪ್ರಯೋಗದಲ್ಲಿ ಬಂದ ಅಂಶಗಳ ಆಧಾರದ ಮೇಲೆ ಲಸಿಕೆಯನ್ನು ಜನತೆಗೆ ಹಾಕಬೇಕೆ, ಬೇಡವೇ ಎಂಬುದು ನಿರ್ಧಾರವಾಗುತ್ತದೆ. ಆದರೆ, ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ನಿಯಂತ್ರಣಕ್ಕಾಗಿ ನೀಡುತ್ತಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ನೇರವಾಗಿ ಜನತೆಯ ಮೇಲೆ ಪ್ರಯೋಗ ಮಾಡುತ್ತಿರುವುದು ಎಷ್ಟು ಸರಿ.
-ಶಿವಸುಂದರ್, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News