'ರಾಜಭವನ ಚಲೋ' ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ?: ಬಿಜೆಪಿ ಆಕ್ರೋಶ

Update: 2021-01-20 12:10 GMT

ಬೆಂಗಳೂರು, ಜ.20: ಅಧಿಕಾರದುದ್ದಕ್ಕೂ ರೈತರ ಆತ್ಮಹತ್ಯೆಗಳಿಗೆ ಕಾರಣವಾದ ರಾಜ್ಯ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದ ರೈತ ಪರ ಕಾಯ್ದೆಗಳಿಗೆ ನಾಟಕೀಯ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ನೀವು ರೈತ ಪರ ಆಡಳಿತ ನಡೆಸಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರಲಿಲ್ಲ, ಅಲ್ಲವೇ? ಎಂದು ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಆತ್ಮೀಯ ರಾಜ್ಯ ಕಾಂಗ್ರೆಸ್, 2013-14ರಲ್ಲಿ 104, 2014-15ರಲ್ಲಿ 128, 2015-16ರಲ್ಲಿ 1483, 2016-17ರಲ್ಲಿ 1185 ಹಾಗೂ 2018-19ರಲ್ಲಿ 900 ಹೀಗೆ 3800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಅವರ ಕಣ್ಣೀರು ಒರೆಸುವ ಬದಲು ಟಿಪ್ಪು ಜಯಂತಿ ಆಚರಣೆಯಲ್ಲಿ ನಿರತರಾಗಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ, ಚೆನ್ನಾಗಿದೆ ಎಂದು ಬಿಜೆಪಿ ಟೀಕಿಸಿದೆ.

2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಎಐಸಿಸಿ ಘೋಷಿಸಿತ್ತು. ನರೇಂದ್ರ ಮೋದಿ ಸರಕಾರ ಆ ಕಾರ್ಯ ಮಾಡಿದಾಗ ಮಾತ್ರ ಬೀದಿಗೆ ಬಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.

ಆತ್ಮೀಯ ರಾಜ್ಯ ಕಾಂಗ್ರೆಸ್, ನಿಮ್ಮ ದುರಾಡಳಿತದಲ್ಲಿ ರೈತ ವಿಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡಾಗ, ‘ರೈತನ ಆತ್ಮಹತ್ಯೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚೆನ್ನಾಗಿ ಕುಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಹೇಳಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ರೈತರು ನೇರವಾಗಿ ಮಾರಾಟ ಮಾಡಿದರೆ ಹೆಚ್ಚು ಲಾಭಗಳಿಸುತ್ತಾರೆ ಎಂಬುದು ಲೋಕ ಸತ್ಯ. ಆದರೆ ನೀವು ಮಾತ್ರ ಇದನ್ನು ವಿರೋಧಿಸುತ್ತಿದ್ದೀರಿ. ರಾಜ್ಯ ಕಾಂಗ್ರೆಸ್ ನೀವೇಕೆ ದಲ್ಲಾಳಿಗಳ ಪರ ವಕಾಲತ್ತು ವಹಿಸುತ್ತೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಲಜ್ಜೆ ಬಿಟ್ಟ ರಾಜ್ಯ ಬಿಜೆಪಿ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವ ನಿಮ್ಮ ಬಿ.ಸಿ.ಪಾಟೀಲ್, ಈಗ ಮತ್ತೊಮ್ಮೆ ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ, ಸರಕಾರದ ನೀತಿಗಳಲ್ಲ ಅಂದಿದ್ದಾರೆ. ರೈತರಿಗೆ ಅವಮಾನಿಸುವ ಪಕ್ಷವಾದ ನಿಮಗೆ ಅವರ ಮಾತುಗಳಿಗೆ ಸ್ಪಷ್ಟನೆ ಕೊಡುವ ಯೋಗ್ಯತೆ ಇದೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News