ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣು; ಕ್ಷೇತ್ರಗಳನ್ನು ಬಿಡುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ

Update: 2021-01-20 12:46 GMT

ಬೆಂಗಳೂರು, ಜ. 20: ರಾಜ್ಯ ಸರಕಾರ ಎಲ್ಲ ಹೋರಾಟಗಳಿಗೆ ಬೆಲೆ ಕೊಡಬೇಕು. ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವುದು ಸರಕಾರದ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಇಲ್ಲಿನ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ರೈತರ ಪರವಾಗಿ ಕಾಂಗ್ರೆಸ್ ರಾಜಭವನ ಚಲೋ ನಡೆಸುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ರೈತರ ಪರ ಹೋರಾಟ ಮಾಡಲು ಅವಕಾಶವಿದೆ. ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅವರು ಬೂಟಾಟಿಕೆಗಾಗಿ ರೈತರ ಮನೆಯಲ್ಲಿದ್ದು ಬಂದಿದ್ದಾರೆ. ಹೀಗಾಗಿ ಆ ವೀಕ್ ಮೈಂಡ್ ಬಗ್ಗೆ ನಾನು ಮಾತನಾಡಲಾರೆ. ಇಲಾಖೆಯ ಉಪನಿರ್ದೇಶಕರ ವರ್ಗಾವಣೆಗೂ ಹಣ ಕೇಳುತ್ತಿದ್ದಾರೆ. ಪಾಪ ಅವನು ಎಲ್ಲಿಂದ ಹಣ ತಂದು ಕೊಡುತ್ತಾನೆ. ಕೊನೆಗೆ ರೈತರಿಂದಲೇ ಹಣ ಪಡೆಯಬೇಕಿದೆ. ಹೀಗಾಗಿ ರೈತರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಬಿ.ಸಿ.ಪಾಟೀಲ್ ವಿರುದ್ಧ ಎಚ್‍ಡಿಕೆ ವಾಗ್ದಾಳಿ ನಡೆಸಿದರು.

ರಾಮನಗರ-ಚನ್ನಪಟ್ಟಣ ಅವಳಿ ನಗರ: ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ. ರಾಮನಗರ ಜಿಲ್ಲೆಯನ್ನು ಬಿಟ್ಟು ನಾನು ಹೊರಗೆ ಹೋಗಲ್ಲ. ಎಂದಿಗೂ ಚನ್ನಪಟ್ಟಣ ಕ್ಷೇತ್ರ ಬಿಡುವುದಿಲ್ಲ. ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರ ಬಿಡುವುದಿದ್ದರೆ ನಾನು ಚನ್ನಪಟ್ಟಣದಲ್ಲಿ ಏಕೆ ಓಡಾಡುತ್ತಿದ್ದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನ ಪಡುತ್ತಿದ್ದೇನೆ. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣು. ನಾನು ಸಾಯುವುದರೊಳಗೆ ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರ ಮಾಡುತ್ತೇನೆ ಎಂದು ಕುಮಾರಸ್ವಾಮಿ ಪ್ರಕಟಿಸಿದರು.

ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲೇ ನಗರಪಾಲಿಕೆಯಾಗಿ ಮಾಡುತ್ತೇನೆ. ಈ ಎರಡೂ ಕ್ಷೇತ್ರ ನನ್ನ ಕಣ್ಣುಗಳು, ಕಳೆದುಕೊಂಡರೆ ನಾನು ಕುರುಡಾಗುತ್ತೇನೆ. ಹೀಗಾಗಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲದಿದ್ದರೆ ಈ ಎರಡೂ ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ ಕೈಗೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಕ್ಷೇತ್ರ ಬಿಡಲಿದ್ದಾರೆಂಬ ಪುಕಾರುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಬೇಡಿ ಎಂದ ಅವರು, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಯಾರು ಬೇಕಾದರೂ ಸ್ಪರ್ಧೆ ಮಾಡಲಿ ನನ್ನ ವಿರೋಧವಿಲ್ಲ. ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಆದರೆ, ನಾನು ಬದುಕಿರೋವರೆಗೂ ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡುವುದಿಲ್ಲ. ಆ ನಂಬಿಕೆ ನನಗಿದೆ. ಅವರೇ ಬೆಳೆಸಿದ ಮಗು ನಾನು. ಕೊನೆಗೆ ಅವರೇ ಚಿವುಟುತ್ತಾರ. ಹೀಗಾಗಿ ನನಗೆ ವಿಶ್ವಾಸವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News