ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾದ ವಿ.ಕೆ. ಶಶಿಕಲಾ

Update: 2021-01-20 14:43 GMT

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ದಿವಂಗತ ಜೆ.ಜಯಲಲಿತಾರ ಆಪ್ತೆ ವಿ.ಕೆ. ಶಶಿಕಲಾ ಜ್ವರ, ಬೆನ್ನುನೋವು ಹಾಗೂ ಉಸಿರಾಟದ ಸಮಸ್ಯೆಯ ಕಾರಣಕ್ಕೆ ನಗರದ ಬೌರಿಂಗ್ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಲ್ಲಿ ವರದಿಯು ನೆಗೆಟಿವ್ ಆಗಿತ್ತು. ಅವರ ಗಂಟಲು ದ್ರವವನ್ನು ಆರ್ ಟಿ-ಪಿಸಿಆರ್ ಟೆಸ್ಟ್ ಗಾಗಿ ಕಳುಹಿಸಲಾಗಿದೆ. ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ  ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ 10 ಕೋ.ರೂ. ದಂಡ ಪಾವತಿಸಿ ಜನವರಿ 27ರಂದು  ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಬೆಂಗಳೂರು ಜೈಲಿನಿಂದ ಇದೇ ಮೊದಲ ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ ಶಶಿಕಲಾ ಅವರ ರಕ್ತದ ಆಮ್ಲಜನಕ ಮಟ್ಟ ಕಡಿಮೆಯಾಗಿತ್ತು. ಹೀಗಾಗಿ ಅವರಿಗೆ ಕೋವಿಡ್-19 ಸೋಂಕು ತಗಲಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಶಿಕಲಾ ಬೌರಿಂಗ್ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳ ಬಳಿಕ ಬೆಂಗಳೂರು ಜೈಲು ಅಧಿಕಾರಿಗಳು ಶಶಿಕಲಾ ಅವರ ಕಾನೂನು ತಂಡಕ್ಕೆ ಅವರ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News