ಭೂ ಕಬಳಿಕೆ ನಿಷೇಧ ಕಾಯ್ದೆ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್

Update: 2021-01-20 14:25 GMT

ಬೆಂಗಳೂರು, ಜ.20: ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಸಾಂವಿಧಾನಿಕ ಸಿಂಧುತ್ವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ, ಸರಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಹಾಗೂ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತಷ್ಟು ಬಲಬಂದಂತಾಗಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸುಮಾರು 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ತೀರ್ಪು ನೀಡಿದೆ.

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಅಡಿ ವಿಶೇಷ ನ್ಯಾಯಾಲಯಕ್ಕೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿರುವುದನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದ ಮನವಿಯನ್ನು ಇದೇ ವೇಳೆ ನ್ಯಾಯಪೀಠವು ತಿರಸ್ಕರಿಸಿತು.

ಭೂ ಕಬಳಿಕೆ ಪ್ರಕರಣಗಳಲ್ಲಿನ ಸಾಕ್ಷ್ಯ ಪರಿಗಣಿಸುವುದಕ್ಕೆ ಕಾಯ್ದೆಯಡಿ ಸ್ಥಾಪನೆಯಾಗಿರುವ ವಿಶೇಷ ಕೋರ್ಟ್‍ಗೆ ಅವಕಾಶ ನೀಡಿದೆ. ಹಾಗೆಯೇ ವಿಶೇಷ ನ್ಯಾಯಾಲಯವು ಸಾಧ್ಯವಾದಷ್ಟು ಪ್ರಕರಣಗಳ ಅಗತ್ಯತೆಗಳನ್ನು ಆಧರಿಸಿ ವಾರಂಟ್ ಹೊರಡಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಈ ಕಾಯ್ದೆಯು ಸಂವಿಧಾನದ 14, 20 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಹೈಕೋರ್ಟ್‍ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News