ರಾಜ್ಯ ಬಿಜೆಪಿ, ಪ್ರಧಾನಿ ಮೋದಿ, ಬಿಎಸ್‌ವೈಗೆ ಸರಣಿ ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್

Update: 2021-01-20 14:28 GMT

ಬೆಂಗಳೂರು, ಜ.20: ರೈತ ವಿರೋಧಿ ಧೋರಣೆಯ ಕೇಂದ್ರದ ಬಿಜೆಪಿ ಸರಕಾರಕ್ಕೆ ಹಾಗೂ ಕಳೆದ 50ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟಿಸುತ್ತಿರುವ ರೈತರ ಆಗ್ರಹಗಳಿಗೆ ಕಿವಿಗೊಡದೆ 100ಕ್ಕೂ ಹೆಚ್ಚು ರೈತರು ಹುತಾತ್ಮರಾದರೂ ಹೃದಯ ಹೀನರಂತೆ ವರ್ತಿಸುತ್ತಿರುವ ರಾಜ್ಯ ಬಿಜೆಪಿ, ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದಷ್ಟು ಪ್ರಶ್ನೆಗಳು ಎಂದು ಕೆಪಿಸಿಸಿ ಟ್ವೀಟ್ ಮೂಲಕ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದೆ.

ಪ್ರಶ್ನೆ 1: ಕೃಷಿ ಕಾಯ್ದೆಯಂತಹ ಪ್ರಮುಖ ನಿರ್ಧಾರಕ್ಕೆ ಸಾಕಷ್ಟು ವಿಸ್ತೃತ ಚರ್ಚೆ, ವಿಮರ್ಶೆಗಳು ಅಗತ್ಯವಿದ್ದರೂ ಕೊರೋನ, ಲಾಕ್‍ಡೌನ್‍ನಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಆತುರವಾಗಿ ಸುಗ್ರೀವಾಜ್ಞೆ ಹಾಗೂ ಕಾನೂನು ಬಾಹಿರವಾಗಿ ಧ್ವನಿ ಮತದ ಮೂಲಕ ಅಸಂವಿಧಾನಿಕ ಅನುಮೋದನೆ ಪಡೆಯುವುದು ಪ್ರಜಾಪ್ರಭುತ್ವ ಗೌರವಿಸುವ ಲಕ್ಷಣವೇ?

ಪ್ರಶ್ನೆ 2: ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನಿಗಳು, ಪಾಕ್ ಏಜೆಂಟರು, ದೇಶದ್ರೋಹಿಗಳು ಎಂದೆಲ್ಲಾ ಬಗೆಬಗೆಯಲ್ಲಿ ಅವಮಾನಿಸಿ, ರೈತರನ್ನು ಹೇಡಿಗಳು ಎಂದಿದ್ದೀರಿ. ನೀವು ಈ ವಿಕೃತ ಮನಸ್ಥಿತಿ ಬಿಟ್ಟು ಸೌಜನ್ಯ ಕಲಿಯುವುದು ಯಾವಾಗ, ಪ್ರತಿಭಟನೆ ರೈತರ ಹಕ್ಕು ಎಂದು ಅರಿಯುವುದು ಯಾವಾಗ ರಾಜ್ಯ ಬಿಜೆಪಿ?

ಪ್ರಶ್ನೆ 3: ಕನಿಷ್ಠ ಬೆಂಬಲ ಬೆಲೆ (MSP) ಏಕೆ ಕೃಷಿ ಕಾಯ್ದೆಗಳ ಭಾಗವಾಗಿಲ್ಲ. ಕೇವಲ ಮಾತಿನಲ್ಲಿ ಬೆಂಬಲ ಬೆಲೆ ಮುಂದುವರಿಯುತ್ತವೆ ಎನ್ನುತ್ತಿದ್ದೀರಿ. ಲಿಖಿತ ಭರವಸೆ ಕೊಡುತ್ತೇವೆ ಎನ್ನುತ್ತಿರುವಿರಿ. ಆದರೆ ಎಂಎಸ್‍ಪಿಯನ್ನು ಶಾಸನಬದ್ಧವಾಗಿಸಲು ಹಾಗೂ ಕಾಯ್ದೆಯಲ್ಲಿ ಜಾರಿಗೊಳಿಸಲು ಏಕೆ ಒಪ್ಪುತ್ತಿಲ್ಲ?

ಪ್ರಶ್ನೆ 4: ಕೃಷಿ ಸಂಬಂಧಿತ ಕಾನೂನುಗಳು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಹಿತಾಸಕ್ತಿ ಮರೆತು, ರಾಜ್ಯಗಳ ಅಭಿಪ್ರಾಯಗಳನ್ನು ಪಡೆಯದೆ ತರಾತುರಿಯಲ್ಲಿ ದರೋಡೆಕೋರರಂತೆ ಅಸಂವಿಧಾನಿಕ ಮಾರ್ಗದಲ್ಲಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದೇಕೆ ರಾಜ್ಯ ಬಿಜೆಪಿ?

ಪ್ರಶ್ನೆ 5: ರೈತರನ್ನ ಅದಾನಿ, ಅಂಬಾನಿಗಳ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ರೂಪಿಸಿದ್ದು ಬಯಲಾಗಿದೆ. ರಿಲಯನ್ಸ್ ಸಂಸ್ಥೆ ಕೃಷಿ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ ಬೆನ್ನಲ್ಲೆ ಕರ್ನಾಟಕದಲ್ಲಿ ಖರೀದಿಗೆ ಮುಂದಾಗುತ್ತದೆ, ಅದಕ್ಕೆ ರಾಜ್ಯ ಬಿಜೆಪಿ ಪ್ರಚಾರ ನೀಡುತ್ತದೆ. ಈ ನವರಂಗಿ ನಾಟಕ ಏಕೆ?

ಪ್ರಶ್ನೆ 6: ಉದ್ಯಮಿ ಸ್ನೇಹಿತರ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತೀರಿ. ಎನ್‍ಪಿಎ ಹೆಸರಲ್ಲಿ ದೇಶದ ತೆರಿಗೆದಾರರ ಬೆವರಿನ ಹಣವನ್ನು ದೋಚುವ ಮಾರ್ಗ ಕಂಡುಕೊಂಡಿದ್ದೀರಿ. ಆದರೆ ಸಂಕಷ್ಟ ಎದುರಿಸುತ್ತಿರುವ ರೈತರ ಸಾಲ ಮನ್ನಾ ಮಾಡುವ ಮನಸು ನಿಮಗೇಕಿಲ್ಲ? ರೈತಾಪಿ ವರ್ಗದ ಹಿತರಕ್ಷಣೆ ನಿಮಗೆ ಆದ್ಯತೆಯಲ್ಲ ಏಕೆ?

ಪ್ರಶ್ನೆ 7: ಹಸಿರು ಟವೆಲ್ ಹಾಕಿಕೊಂಡು ನಾನು ರೈತರ ಮುಖ್ಯಮಂತ್ರಿ ಎಂದಿದ್ದ ಯಡಿಯೂರಪ್ಪ ಅವರೇ, ಈಗ ಕಾರ್ಪೋರೇಟ್‍ಗಳ ಸಿಎಂ ಆಗಿ ಬದಲಾಗಿದ್ದೇಕೆ? ಪ್ರವಾಹದಲ್ಲಿ ನೊಂದ ರೈತರಿಗೆ ಪರಿಹಾರವಿಲ್ಲ, ಮನೆ ಕಟ್ಟಿಸಲಿಲ್ಲ, ಸಾಂತ್ವನವಿಲ್ಲ. ಕೇಂದ್ರದಿಂದ ಪರಿಹಾರ ತರಲಾಗಲಿಲ್ಲ. ಉದ್ಯಮಿಗಳ ಸ್ನೇಹದ ಮುಂದೆ ಹಸಿರು ಟವೆಲ್ ಕಳೆದು ಹೋಯ್ತೆ?

ಪ್ರಶ್ನೆ 8: ಬಿಜೆಪಿ ದ್ವಿಗುಣ ಮಾಡುತ್ತಿರುವುದು ರೈತರ ಆದಾಯವನ್ನಲ್ಲ, ಅದಾನಿ, ಅಂಬಾನಿಗಳ ಆದಾಯವನ್ನು. ರಾಜ್ಯ ಬಿಜೆಪಿ, ರಿಲಯನ್ಸ್ ಸಂಸ್ಥೆ ಎಂಎಸ್‍ಪಿಗಿಂತ ಹೆಚ್ಚು ದರದಲ್ಲಿ ಖರೀದಿಸುತ್ತಿದೆ ಎಂದು ಸುಳ್ಳು ಪ್ರಚಾರ ನೀಡುವ ನೀವು ಎಂಎಸ್‍ಪಿಗೆ ಮೇಲ್ಪಟ್ಟು ರಾಜ್ಯ ಸರಕಾರ ನೀಡುತ್ತಿದ್ದ ಪ್ರೋತ್ಸಾಹ ಧನ ನಿಲ್ಲಿಸಿದ್ದೇಕೆ?

ಪ್ರಶ್ನೆ 9: ಕೃಷಿ ಕಾಯ್ದೆಗಳಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾಲಕಾಲಕ್ಕೆ ತರಬಹುದಾದ ನಿಯಮಗಳನ್ನು ಯಾರೂ ಪ್ರಶ್ನಿಸದಿರುವಂತೆ ನಿಯಮ ರೂಪಿಸಿದ್ದೇಕೆ? ರೈತನ ಪ್ರಶ್ನಿಸುವ ಹಕ್ಕು ಕಿತ್ತುಕೊಂಡ ಈ ಸರ್ವಾಧಿಕಾರಿ ನೀತಿಯ ಹಿಂದಿರುವ ನಿಮ್ಮ ಕಾರ್ಪೋರೇಟ್ ಗೆಳೆಯರ ಲಾಬಿ ಎಷ್ಟು ದೊಡ್ಡದು?

ಪ್ರಶ್ನೆ 10: ಒಪ್ಪಂದ ಕೃಷಿಯ ತಿದ್ದುಪಡಿಯಲ್ಲಿ ರೈತನಿಗೆ ಕಂಪೆನಿಗಳಿಂದ ಅನ್ಯಾಯವಾದಾಗ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ಕಿತ್ತುಕೊಂಡಿದ್ದೀರಿ. ದಂಡಾಧಿಕಾರಿ, ಜಿಲ್ಲಾಧಿಕಾರಿಗಳ ತೀರ್ಮಾನವೆ ಅಂತಿಮಗೊಳಿಸಿ, ರೈತನಿಗೆ ನ್ಯಾಯಾಂಗದ ಬಾಗಿಲು ಮುಚ್ಚಿದ್ದು ಏಕೆ? ರೈತನನ್ನು ನ್ಯಾಯ ವಂಚಿತನನ್ನಾಗಿಸುವ ಧೂರ್ತತನ ನಿಮ್ಮದೇಕೆ?

ಪ್ರಶ್ನೆ 11: ರೈತರೇ ಬೇಡವನ್ನುತ್ತಿರುವ ಈ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಒಪ್ಪದೆ ಇಷ್ಟು ಮೊಂಡು ಹಠಕ್ಕೆ ಬಿದ್ದಿರುವ ನಿಮ್ಮ ಭಂಡತನಕ್ಕೆ ಕಾರಣಗಳೇನು? ಕೂಡಲೇ ಕಾಯ್ದೆ ಹಿಂಪಡೆಯಿರಿ, ಸಂಸತ್ತಿನಲ್ಲಿ ಚರ್ಚೆಗೆ ಬನ್ನಿ, ವಿಸ್ತೃತವಾಗಿ ಸಾಧಕ ಬಾಧಕಗಳ ಚರ್ಚೆ ನಡೆಯಲಿ ಎಂದು ರಾಜ್ಯ ಬಿಜೆಪಿ ನಾಯಕರ ಎದುರು ಕೆಪಿಸಿಸಿ ಪ್ರಶ್ನೆಗಳನ್ನು ಮುಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News