ಎಲ್ಲಾ ಹುದ್ದೆಗಳಲ್ಲೂ ಬಿಎಸ್‍ವೈ ಮನೆಯವರೇ ಇದ್ದಾರೆ: ಬಿಜೆಪಿ ಶಾಸಕ ಯತ್ನಾಳ್

Update: 2021-01-20 14:31 GMT

ಬೆಂಗಳೂರು, ಜ.20: ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ರಾಜಕೀಯ ಅಧಿಕಾರ ಕೊಡಬೇಕು. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದೇ ಕುಟುಂಬಕ್ಕೆ ಎಂಎಲ್‍ಎ, ನಿಗಮ, ಎಂಪಿ, ರಾಜ್ಯಸಭಾ, ಪಕ್ಷದ ಜವಾಬ್ದಾರಿ ಎಲ್ಲವೂ ಕೊಡಬಾರದು ಎಂದು ಆಗ್ರಹಿಸಿದ್ದಾರೆ.

ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಸಾಮಾನ್ಯ ಕಾರ್ಯಕರ್ತರ ಪರಿಶ್ರಮ ಹೆಚ್ಚಿರುತ್ತದೆ. ಆದರೆ, ಅಧಿಕಾರದ ಹಂಚಿಕೆಯಲ್ಲಿ ಮಾತ್ರ ಇವರನ್ನು ದೂರ ಇಡಲಾಗುತ್ತಿದೆ. ಕಾರ್ಯಕರ್ತರು ಇರುವುದು ಸಚಿವರನ್ನು ತಲೆ ಮೇಲೆ ಹೊತ್ತು ಅಡ್ಡಾಡುವುದಕ್ಕಾಗಿಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವು ಸಲ ಸಚಿವ ಸ್ಥಾನ ಅನುಭವಿಸಿದವರು ತ್ಯಾಗ ಮಾಡಬೇಕು. ಹಿರಿಯರು ಪಕ್ಷದ ಕಡೆ ಹೋಗಬೇಕು, ಪಕ್ಷದ ಸಂಘಟನೆ ಮಾಡಬೇಕು. ಅವರು ಹಳ್ಳಿ ಹಳ್ಳಿಗೆ ಹೋಗಬೇಕು. ಹೊಸಬರು, ಯುವಕರು ಸಚಿವರಾಗಲು ಅವಕಾಶ ಕೊಡಬೇಕೆಂದು ಅವರು ತಿಳಿಸಿದ್ದಾರೆ.

ಎಲ್ಲಾ ಹುದ್ದೆಗಳಲ್ಲೂ ಬಿಎಸ್‍ವೈ ಮನೆಯವರೆ

ವಂಶ ಪಾರಂಪರ್ಯ ಅಂತ್ಯ ಆಗಬೇಕು. ಭ್ರಷ್ಟಾಚಾರ ಮುಕ್ತ ಸರಕಾರ ಕೊಡಬೇಕು ಅನ್ನೋದು ಪ್ರಧಾನಿ ನರೇಂದ್ರ ಮೋದಿಯ ಕನಸಾಗಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮನೆಯವರೇ ಎಲ್ಲಾ ಹುದ್ದೆಯಲ್ಲಿ ಇದ್ದಾರೆ ಅಂತ ನಾನು ಹೇಳುತ್ತಿದ್ದೇನೆ. ಒಂದೇ ಕುಟುಂಬದ ಸದಸ್ಯರು ಹೆಚ್ಚು ಹುದ್ದೆಯಲ್ಲಿ ಇದ್ದರೆ, ಎಲ್ಲವನ್ನೂ ಕಟ್ ಮಾಡಿ ಒಂದೇ ಹುದ್ದೆ ಕೊಡಬೇಕು. ಉಳಿದವನ್ನು ಕಾರ್ಯಕರ್ತರಿಗೆ ಬಿಟ್ಟುಕೊಡಬೇಕು.

-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News