ಮುನಿರತ್ನ ವಿರುದ್ಧದ ನಕಲಿ ವೋಟರ್ ಐಡಿ ಪ್ರಕರಣ: ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ

Update: 2021-01-20 16:12 GMT

ಬೆಂಗಳೂರು, ಜ.20: ಆರ್.ಆರ್.ನಗರದ ಹಾಲಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ನಕಲಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದ, ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮುನಿರತ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಗರದ ಎನ್.ಆನಂದ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪ್ರಕರಣದ ತನಿಖೆ ಪೊಲೀಸರಿಂದ ಮುಂದುವರಿದಿದೆ ಎಂಬ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನ್ಯಾಯಪೀಠವು ನಿರಾಕರಿಸಿತು.

ಹಿಂದಿನ ವಿಚಾರಣೆ ವೇಳೆ, ಶಾಸಕ ಮುನಿರತ್ನ ವಿರುದ್ಧ ದಾಖಲಿಸಿರುವ ದೂರಿನ ಮೇರೆಗೆ ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆಯನ್ನು ಪರಿಶೀಲಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಅವರು ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಹಾಗೆಯೇ, ತನಿಖೆ ನಡೆಸಬೇಕಿರುವ ಅಂಶಗಳನ್ನು ಗುರುತಿಸಬೇಕು. ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.

ಪ್ರಕರಣವೇನು: 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಮುನಿರತ್ನ ಸ್ಪರ್ಧಿಸಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿಯ ಬೆಂಬಲಿಗರ ಅಪಾರ್ಟ್‍ಮೆಂಟ್‍ನಲ್ಲಿ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಹಾಗೂ ಮುನಿರತ್ನ ಸ್ಪರ್ಧಿಸಿದ್ದ ಪಕ್ಷದ ಕರಪತ್ರಗಳು ಪತ್ತೆಯಾಗಿದ್ದವು.

ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸ್ಥಳೀಯ ನಿವಾಸಿ ರಾಕೇಶ್ ಪ್ರತ್ಯೇಕವಾಗಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಜಾಲಹಳ್ಳಿ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು ಸಿಬಿಐ ತನಿಖೆ ಕೋರಿದ್ದಾರೆ. ಸ್ಥಳೀಯ ಎನ್.ಆನಂದ್ ಕುಮಾರ್ ಎಂಬುವರು ದಾಖಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News