ದಿಲ್ಲಿಯಲ್ಲಿ ನಡೆಯಲಿರುವ ಟ್ರಾಕ್ಟರ್ ರ್‍ಯಾಲಿಯಲ್ಲಿ ಭಾಗವಹಿಸಲು ಮೈಸೂರಿನಿಂದ ತೆರಳಿದ ರೈತರು

Update: 2021-01-20 16:55 GMT

ಮೈಸೂರು,ಜ.20: ದಿಲ್ಲಿಯಲ್ಲಿ ಜ.26 ಗಣರಾಜ್ಯೋತ್ಸವ ದಿನದಂದು ನಡೆಯುವ ರೈತರ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಭಾಗವಹಿಸಲು ಮೈಸೂರು ವಿಭಾಗದಿಂದ ತೆರಳುತ್ತಿರುವ ಸುಮಾರು 100 ಮಂದಿ ರೈತರನ್ನು ಸ್ವಾಗತಿಸಿ ಬೀಳ್ಕೊಡಲಾಯಿತು.

ನಗರದ ಗನ್‍ಹೌಸ್ ವೃತ್ತದಲ್ಲಿ ರೈತ-ದಲಿತ-ಕಾರ್ಮಿಕ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮತಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳ ವತಿಯಿಂದ ಬುಧವಾರ ಮೈಸೂರಿಗೆ ಆಗಮಿಸಿದ ಅರಳಾರು ಮಂಜೇಗೌಡರ ನೇತೃತ್ವದ ರೈತ ತಂಡಕ್ಕೆ ಸ್ವಾಗತಿಸಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ದಿಲ್ಲಿಗೆ ಹೊರಟ ರೈತ ತಂಡಕ್ಕೆ ಮೈಸೂರಿನಲ್ಲಿ ಸ್ವಾಗತ ನೀಡಿ, ಅಕ್ಕಿ, ತರಕಾರಿ, ಎಣ್ಣೆ, ಬೇಳೆ ಸೇರಿದಂತೆ ಇತರೆ ಪದಾರ್ಥಗಳನ್ನು ನೀಡಲಾಯಿತು. ಜೊತೆಗೆ ಅವರ ಪ್ರಯಾಣಕ್ಕೆ ಎರಡು ಕ್ಯಾಂಟರ್ ಗಳನ್ನು ವ್ಯವಸ್ಥೆ ಮಾಡಿ ಅವರ ಪೆಟ್ರೋಲ್ ಖರ್ಚಿಗೆ ಹಣ ನೀಡಲಾಯಿತು.

ಇದೇ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಮ್ಮ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಜನರು ಪುಂಡಪೋಕರಿಗಳಾಗಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಚಿವನೊಬ್ಬ ಅವಿವೇಕತನದಿಂದ ಮಾತನಾಡಿದ್ದಾನೆ. ಇವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಂಕಷ್ಟ ನಿವಾರಣೆ ಮಾಡಬೇಕಾದ ಸರ್ಕಾರಗಳು ತೇಪೆ ಹಚ್ಚುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಉಗ್ರಗಾಮಿಗಳ ಹೋರಾಟ, ಖಾಲಿಸ್ತಾನಿಗಳ ಹೋರಾಟ ಅನ್ನುವ ರೀತಿ ಮಾತನಾಡುತ್ತಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಅದೇ ಜನತೆ ಜೊತೆ ಮಾತುಕತೆಯ ಆಟವನ್ನು ಆಡುತ್ತಿದ್ದಾರೆ. ಹತ್ತು ಸಭೆಯನ್ನು ಮಾಡಿಸಿ ದೇಶದ ರೈತರ ಬಗ್ಗೆ ತಪ್ಪು ಅಭಿಪ್ರಾಯ ಸೃಷ್ಟಿ ಮಾಡುವ ರೀತಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. 

ದೇಶದ ರೈತರು ತೊಡೆ ತಟ್ಟಿ ನಿಂತಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆ ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು. ಶಾಸನ ಸ್ವರೂಪದ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ರೈತ ದಲಿತ ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಈ ರ್‍ಯಾಲಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ನಾವು ಸೇರಿದಂತೆ ಮತ್ತೊಂದು ತಂಡ ದಿಲ್ಲಿಗೆ ತೆರಳಲಿದೆ ಎಂದು ಹೇಳಿದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು 90 ರ ದಶಕದಲ್ಲಿ ಡಬ್ಲ್ಯುಟಿ ಒಪ್ಪಂದ ಆದಾಗ, ದೇಶ ರೈತರ ಮರಣಶಾಸನ ಬರೆಯುತ್ತಿದೆ, 20 ವರ್ಷಗಳ ನಂತರ ರೈತರ ಬದುಕು ಹಾಳಾಗುತ್ತದೆ ಎಂದು ಹೇಳಿದ್ದರು. ಆಗ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಈಗ ಅದೇ ಜನ  ಅವರು ಹೇಳಿರುವ ಮಾತು ಸತ್ಯ ಎಂದು ಈಗ ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಮ್ಮ ದೇಶದ ರೈತರ ಮರಣ ಶಾಸನವನ್ನು ಪ್ರಧಾನಿ ಬರೆಯುತ್ತಿದ್ದಾರೆ.
-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News