ಜೆಡಿಎಸ್ ಪಕ್ಷ ದೇವೇಗೌಡರ ಹಿಡಿತದಿಂದ ಕೈ ತಪ್ಪಿದೆ: ಶಾಸಕ ಜಿ.ಟಿ.ದೇವೇಗೌಡ

Update: 2021-01-20 17:11 GMT

ಮೈಸೂರು,ಜ.20: ಜೆಡಿಎಸ್ ಪಕ್ಷ ಎಚ್.ಡಿ.ದೇವೇಗೌಡರ ಹಿಡಿತದಿಂದ ಕೈ ತಪ್ಪಿದೆ. ದೇವೇಗೌಡರೇ ಮಕ್ಕಳ ಮಾತನ್ನು ಕೇಳುವ ಸ್ಥಿತಿಯಲ್ಲಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಬೆಳೆಸಿದ ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ದೇವೇಗೌಡರಂತೆಯೇ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆಯೂ ಗೌರವಯುತವಾಗಿದ್ದೇನೆ. ಆದರೆ, ಕುಮಾರಸ್ವಾಮಿ ನುಡಿಯೋದೆ ಒಂದು ನಡೆಯೋದೆ ಒಂದು. ಪಕ್ಷದಲ್ಲಿ ದೊಡ್ಡಗೌಡರ ಮಾತು ನಡೆಯುತ್ತಿಲ್ಲ ಎನ್ನುವ ಬೇಸರವಿದೆ ಎಂದರು.

ಪಕ್ಷ ಸಂಘಟನೆಗೆ ಆಸಕ್ತಿ ಇಲ್ಲದವರಿಗೆ ಹೇಗೆ ಹುದ್ದೆ ಕೊಡಲಿ ಎಂಬ ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಚಾಮುಂಡೇಶ್ವರಿ ಕ್ಷೇತ್ರದಿಂದ “ಕುಮಾರ ಪರ್ವ” ಕಾರ್ಯಕ್ರಮ ರೂಪಿಸಿದ್ದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮರೆತಿದ್ದಾರೆ. ಕುಮಾರ ಪರ್ವದಿಂದಲೇ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದ್ದು. ಅಲ್ಲದೆ, ಎಚ್‍ಡಿಕೆ ಸಿಎಂ ಆಗಬೇಕೆಂದವರಲ್ಲಿ ನಾನೇ ಮೊದಲಿಗ. ನಾನು ಕುಮಾರಪರ್ವ ಮಾಡಿದ್ದರಿಂದಲೇ ಜೆಡಿಎಸ್ ನ 39 ಮಂದಿಯೂ 20-30 ಸಾವಿರ ಅಂತರದಲ್ಲಿ ಗೆಲುವು ಕಾಣಲು ಸಾಧ್ಯವಾಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ನನಗೆ ಮುಖ್ಯಮಂತ್ರಿಗೆ ಸಮನಾದ ಸ್ಥಾನ ನೀಡುತ್ತೇನೆ ಎಂದು ಘೋಷಣೆ ಮಾಡಿದರು. ತದನಂತರ ಬೇಡ ಎಂದರೂ ಉನ್ನತ ಶಿಕ್ಷಣ ಸ್ಥಾನ ನೀಡಿದರು. ಆದರೂ ಅವರ ಮೇಲಿನ ಗೌರವದಿಂದ ಸುಮ್ಮನಾಗಿದ್ದೆ ಎಂದು ತಿಳಿಸಿದರು.

ಚುನಾವಣೆ ಬಂದಾಗ ಇವರೆಲ್ಲಾ ಎಲ್ಲಿರುತ್ತಾರೆ ಎಂದು ಗೊತ್ತಿದೆ ಎಂಬ ಎಚ್‍ಡಿಕೆ ಹೇಳಿಕೆಗೆ ಉತ್ತರಿಸಿ, ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಗೊತ್ತಿದ್ದರೆ ಯಾವ ಪಕ್ಷಕ್ಕೆ ಹೋಗುತ್ತೇನೆ ಎಂದು ಅವರೇ ಹೇಳಲಿ. ಮೈಸೂರಿಗೆ ಬಂದು ನನ್ನನ್ನ ಉಚ್ಚಾಟಿಸುತ್ತೇನೆ ಎಂದಿದ್ದಾರೆ. ಅವರು ಏನು ನಿರ್ಧಾರ ಕೈಗೊಂಡರೂ ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ. ನನ್ನ ಪಕ್ಷ ಸಂಘಟನಾ ಸಾಮರ್ಥ್ಯ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಎಂದು ಜಿಟಿಡಿ ತಿರುಗೇಟು ನೀಡಿದರು.

ಸಾ.ರಾ.ಮಹೇಶ್ ಅವರು ನನ್ನನ್ನು ಭೇಟಿ ಮಾಡಿದ ನಂತರ ಸಭೆಗಳಲ್ಲಿ ಭಾಗವಹಿಸುವಂತೆ ಕೋರಿದರು. ಇನ್ನೂ ಒಂದೆರಡು ತಿಂಗಳ ಕಾಲ ಬಿಡುವು ನೀಡಿ ಎಂದು ಕೋರಿದೆ. ನಂತರದಲ್ಲಿ ನಡೆದ ನಗರಪಾಲಿಕೆ ಸಭೆಗೆ ಆಹ್ವಾನವೇ ನೀಡಲಿಲ್ಲ. ಹೀಗೆ ನನ್ನನ್ನೂ ಕಡೆಗಣಿಸುವುದೂ ಆವರೇ, ಪಕ್ಷ ಸಂಘಟನೆಗೆ ಒತ್ತು ನೀಡುವುದಿಲ್ಲ ಎಂದು ಹೇಳುವುದೂ ಅವರೇ. ಎಲ್ಲ ನೋವನ್ನು ನಾನು ಸಹಿಸಿಕೊಂಡಿದ್ದೇನೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News