ನಿಮ್ಮನ್ನು ಕುರುಬ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ: ಸಿದ್ದರಾಮಯ್ಯರಿಗೆ ಎಚ್.ವಿಶ್ವನಾಥ್ ಎಚ್ಚರಿಕೆ

Update: 2021-01-20 17:15 GMT

ಮೈಸೂರು,ಜ.20: ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ಸ್ವಾಮಿಗಳು ಆರೆಸ್ಸೆಸ್ ನಿಂದ ಎಸ್ಟಿ ಹೋರಾಟಕ್ಕೆ ದುಡ್ಡು ಪಡೆದಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಬಹಳ ನೋವುಂಟು ಮಾಡಿದೆ. ಎಲ್ಲಾ ಸಮುದಾಯಗಳ ಎದುರು ನಮ್ಮ ಸಮುದಾಯದ ಸ್ವಾಮೀಜಿಗಳ ಮಾನವನ್ನು ಹರಾಜು ಮಾಡಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಮತ್ತು ಘನತೆಗೆ ಗೌರವ ತರುವುದಿಲ್ಲ. ನಿಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಸಮಾಜದಿಂದ ನಿಮ್ಮನ್ನು ಬಹಿಷ್ಕಾರ ಮಾಡಬೇಕಾಗುತ್ತದೆ ಹುಷಾರ್ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಸ್ವಾಮೀಜಿಗಳ ಮೇಲೆ ಇಂತಹ ದೊಡ್ಡ ಆಪಾದನೆಯನ್ನು ನಮ್ಮ ಸಮಾಜದವರೇ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವುದುನ್ನು ನೋಡಿದರೆ ಏನು ಹೇಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಇಡೀ ಸಮಾಜ ಎದ್ದು ನಿಂತಿದೆ. ಎಸ್ಟಿ ಹೋರಾಟಕ್ಕೆ ಆರೆಸ್ಸೆಸ್ ನವರು ದುಡ್ಡು ಕೊಟ್ಟಿದ್ದಾರೆ ಎಂದು ಭಾಷಣ ಮಾಡುತ್ತೀರಲ್ಲ. ಸಿದ್ದರಾಮಯ್ಯನವರೇ ನೀವು ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆರೋಪ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ ವಿಶ್ವನಾಥ್, ಈಶ್ವರಪ್ಪ, ರೇವಣ್ಣ ಮತ್ತು ವಿರೋಪಾಕ್ಷಪನ್ನ ಬಗ್ಗೆ ಬೇಕಾದರೆ ಆರೋಪ ಮಾಡಿ, ನೀವು ಆರೋಪ ಮಾಡುತ್ತಿರುವುದು ಸಮಾಜದ ಹಿರಿಯ ಸ್ವಾಮೀಜಿಗಳ ಬಗ್ಗೆ. ಯಾರನ್ನು ನಾವು ಶ್ರದ್ಧಾ ಭಕ್ತಿಯಿಂದ ಜಗದ್ಗುರುಗಳು ಎಂದು ಒಪ್ಪಿಕೊಂಡಿದ್ದೇವೋ ಅವರ ಬಗ್ಗೆ. ಎಸ್ಟಿ ಹೋರಾಟದ ಬಗ್ಗೆ ನೇತೃತ್ವ ವಹಿಸಿಕೊಂಡು ನೂರಾರು ಕಿ.ಮೀ. ಪಾದಯಾತ್ರೆ ಮಾಡಿ ಹೋರಾಟ ಮಾಡುತ್ತಿರುವ ಸ್ವಾಮೀಜಿಗಳ ಬಗ್ಗೆ. ಇಂತಹ ಸ್ವಾಮೀಜಿಗಳ ಬಗ್ಗೆ ಆರೋಪ ಮಾಡುತ್ತಿರರುವುದು ನಿಮ್ಮ ಸಣ್ಣತನ ತೋರುತ್ತದೆ. ಸಿದ್ದರಾಮಯ್ಯನವರೇ ನೀವು ಹೇಳಿರುವ ಮಾತುಗಳಿಂದ ಸ್ವಾಮೀಜಿಗಳು ಸಾಕಷ್ಟು ನೊಂದಿದ್ದಾರೆ, ಕುಗ್ಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನಮ್ಮ ಸಮುದಾಯದ ಮಠದಿಂದಲೇ ಮುಖ್ಯಮಂತ್ರಿಯಾಗಿದ್ದು, ಧಾರ್ಮಿಕ ಸಂಘಟನೆಯಿಂದ ಸಮಾಜ ಒಗ್ಗಟ್ಟಾಗಿ ನಿಂತ ಫಲವಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದನ್ನು ಮರೆತಿದ್ದೀರಾ? ಮಠ ಕಟ್ಟಿದ್ದೂ ಗೊತ್ತಿಲ್ಲ. ಸ್ವಾಮೀಜಿಗಳನ್ನು ಮಾಡಿದ್ದು ಗೊತ್ತಿಲ್ಲ. ಮಠದ ಬಗ್ಗೆ ಯಾವ ಗೌರವ, ಅಭಿಮಾನವೂ ಇಲ್ಲ. ಎಲ್ಲ ಸಮುದಾಯಗಳ ಮುಂದೆ ಮಾನ ಹರಾಜು ಹಾಕಿದ ನಿಮಗೆ ಗೌರವನಾ ಎಂದು ಪ್ರಶ್ನಿಸಿದರು.

ಮೊದಲು ತಾವು ಹೇಳಿರುವ ಮಾತನ್ನು ವಾಪಸ್ ಪಡೆದು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ನೀನೊಬ್ಬನೇ ಬುದ್ದಿವಂತನಲ್ಲ. ನಮಗೂ ಅದು ಗೊತ್ತಿದೆ. ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲವಾದರೆ ಬಿಡು. ಈ ರೀತಿ ಸಮಾಜದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸ್ವಾಮೀಜಿಗಳ ಹೋರಾಟದ ಹಿಂದೆ ಬರಲು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಬೇಕಾದರೆ ಇವರ ಹಿಂದೆ ಹೋದರೆ ತಯಾರಿರುತ್ತಾರೆ. ಇವರು ಯಾರ ಹಿಂದೆಯೂ ಹೋಗಲು ತಯಾರಿಲ್ಲ. ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಜನರ ಪರಿಪಾಟಲು, ಕಥೆ-ವ್ಯಥೆ ಗೊತ್ತಿಲ್ಲ. ಮೈಸೂರಿನಲ್ಲಿ ಬಿಳಿ ಬಟ್ಟೆ ಧರಿಸುವ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನರ ಸಮಸ್ಯೆ ಗೊತ್ತಾಗುವುದೇ ಇಲ್ಲ ಎಂದು ಟೀಕಿಸಿದರು. 

ಕುರುಬರನ್ನು ಎಸ್‍ಟಿಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ವರದಿ ಅಗತ್ಯ ಇಲ್ಲ. ಈಗಾಗಲೇ ನಾವು ರಾಜ್ಯ, ಕೇಂದ್ರದ ನಾಯಕರ ಗಮನಕ್ಕೆ ತಂದಿದ್ದೇವೆ. ಸಂಬಂಧಿಸಿದ ವರದಿಯನ್ನು ಪಡೆದುಕೊಂಡು ಕ್ರಮ ಕೈಗೊಳ್ಳುವ ಬಗ್ಗೆ ಕೇಂದ್ರ ಸಚಿವರು ಹೇಳಿದ್ದಾರೆ. ಸ್ವಾಮೀಜಿಗಳ ಹೋರಾಟ ಸಫಲವಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News