‘ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ’ ಕರ್ನಾಟಕಕ್ಕೆ ಮತ್ತೆ ಅಗ್ರ ಸ್ಥಾನ: ಜಗದೀಶ್ ಶೆಟ್ಟರ್

Update: 2021-01-20 17:52 GMT

ಬೆಂಗಳೂರು, ಜ.20: ನೀತಿ ಆಯೋಗ ಬಿಡುಗಡೆ ಮಾಡಿರುವ ಆವಿಷ್ಕಾರ ಸೂಚ್ಯಂಕ 2020ರ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ನೀತಿ ಆಯೋಗ ಪ್ರಕಟಿಸಿರುವ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಕರ್ನಾಟಕ ಅಗ್ರ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹರ್ಷ ವ್ಯಕ್ತಪಡಿಸಿದ್ದಾರೆ.

ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೀತಿ ಆಯೋಗ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕರ್ನಾಟಕ, 2020ರ ಪಟ್ಟಿಯಲ್ಲೂ ಅಗ್ರ ಸ್ಥಾನ ಉಳಿಸಿಕೊಂಡಿದೆ. ಉಳಿದಂತೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿರುವ 17 ಪ್ರಮುಖ ರಾಜ್ಯಗಳ ಪೈಕಿ ಹರಿಯಾಣ 6ನೇ ಸ್ಥಾನದಲ್ಲಿದ್ದರೆ, ಬಿಹಾರ ಕಡೆಯ ಸ್ಥಾನದಲ್ಲಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದ ಮಾದರಿಯಲ್ಲಿ ನೀತಿ ಆಯೋಗ ದೇಶದ ಆವಿಷ್ಕಾರ ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆವಿಷ್ಕಾರಕ್ಕೆ ಇರುವ ಪೂರಕ ವಾತಾವರಣವನ್ನು ಅದು ವಿಶ್ಲೇಷಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಾನದಂಡಗಳು: ಆವಿಷ್ಕಾರ, ಅನುಷ್ಠಾನ, ಮಾನವ ಸಂಪನ್ಮೂಲ, ಹೂಡಿಕೆ, ವಿಷಯ ತಜ್ಞರು, ಉದ್ಯಮ ಸ್ನೇಹಿ ವಾತಾವರಣ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನ ಪ್ರಸಾರ ಮುಂತಾದ ಅಂಶಗಳನ್ನು ಆಧರಿಸಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳಲ್ಲಿ ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ಜಗದೀಶ್ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News