ದಿಲ್ಲಿ ರೈತರ ಚಳವಳಿ 2ನೇ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧತೆ: ಕೆ.ಎಲ್.ಅಶೋಕ್

Update: 2021-01-20 18:02 GMT

ಚಿಕ್ಕಮಗಳೂರು, ಜ.20: ದಿಲ್ಲಿ ರೈತರ ಹೋರಾಟ 2ನೇ ಸ್ವಾತಂತ್ರ್ಯ ಚಳವಳಿಯ ಸಿದ್ಧತೆಯಾಗಿದ್ದು. ರೈತರು, ಕಾರ್ಮಿಕರು, ಬಡಜನರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಜ.26ಕ್ಕೆ ಬೆಂಗಳೂರಿನಲ್ಲಿ ಬೃಹತ್ ಜನ ಗಣರಾಜ್ಯೋತ್ಸವ ಪರೇಡ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಮಸೂದೆಗಳು ಅಂಬಾನಿ, ಅದಾನಿಯಂತಹ ಶ್ರೀಮಂತ ಬಂಡವಾಳಶಾಯಿಗಳ ಅನುಕೂಲಕ್ಕಾಗಿ ಮಾಡಿರುವ ಕೃಷಿ ಕಾಯ್ದೆಗಳಾಗಿವೆ. ಈ ಮಸೂದೆಗಳನ್ನು ರದ್ದು ಮಾಡಲು ಆಗ್ರಹಿಸಿ ದಿಲ್ಲಿಯಲ್ಲಿ ಕಳೆದ 50ಕ್ಕೂ ಹೆಚ್ಚು ದಿನಗಳಿಂದ 2 ಲಕ್ಷ ರೈತರು ಚಳವಳಿ ಆರಂಭಿಸಿದ್ದರೂ ಪ್ರಧಾನಿ ಮೋದಿ ಮಸೂದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದು ಮೋದಿ ಕಾರ್ಪೋರೆಟ್ ಶಕ್ತಿಗಳೊಂದಿಗೆ ಸಂಪೂರ್ಣವಾಗಿ ಶರಣಾಗಿರುವುದರ ಸಂಕೇತವಾಗಿದೆ ಎಂದರು.

ಕೇಂದ್ರದ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರೈತರು ದಿಲ್ಲಿಯಲ್ಲಿ 50 ದಿನಗಳಿಂದ ಚಳವಳಿ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ 70 ಮಂದಿ ರೈತರು ಅಸುನೀಗಿದ್ದಾರೆ. ದೇಶ, ವಿದೇಶಗಳಿಂದಲೂ ರೈತರ ಚಳವಳಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರ ಸರಕಾರ ರೈತರೊಂದಿಗೆ 10 ಬಾರಿ ಮಾತುಕತೆ ನಡೆಸಿದ್ದರೂ ಮಸೂದೆಗಳನ್ನು ಹಿಂಪಡೆಯಲು ಒಪ್ಪದ ಪರಿಣಾಮ ರೈತರೂ ತಮ್ಮ ಪಟ್ಟನ್ನು ಸಡಿಲಿಸದೇ ಕೃಷಿ ಮಸೂದೆಗಳನ್ನು ರದ್ದು ಮಾಡದ ಹೊರತಾಗಿ ಚಳವಳಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಚಳವಳಿ ನಿರತರು ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ನಂತರ ಇಂತಹ ಹೋರಾಟ ದೇಶದಲ್ಲಿ ನಡೆದಿಲ್ಲ. ರೈತರ ಹೋರಾಟ ದೇಶದಲ್ಲಿ ಇನ್ನು ಮುಂದೆ ನಡೆಯುವ ಎಲ್ಲ ಹೋರಾಟಗಳಿಗೆ ದಿಕ್ಸೂಚಿಯಾಗಿದ್ದು, ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬರೂ ಈ ಹೋರಾಟವನ್ನು ಬೆಂಬಲಿಸಬೇಕೆಂದು ಅಶೋಕ್ ಕರೆ ನೀಡಿದರು.

ದಿಲ್ಲಿಯಲ್ಲಿ ನೂತನ ಕೃಷಿ ಮಸೂದೆಗಳ ವಿರುದ್ಧ ಹೋರಾಟ ಮಾಡುತ್ತಿರುವ ರೈತರು ಪಂಜಾಬ್ ಹಾಗೂ ಹರ್ಯಾಣ ಮೂಲದವರಾಗಿದ್ದು, ನೂತನ ಕೃಷಿ ಮಸೂದೆಗಳಿಂದ ಇಡೀ ದೇಶದ ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ಹೋರಾಟ ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ರೈತರ ಹೋರಾಟ ಬೆಂಬಲಿಸಿ ದೇಶದ ಎಲ್ಲ ರಾಜ್ಯಗಳಲ್ಲೂ ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ಒಪ್ಪಲು ಸಿದ್ಧವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೇಂದ್ರದ ಮೋದಿ ಸರಕಾರ ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ತನ್ನನ್ನು ಮಾರಿಕೊಂಡಿರುವುದೇ ಆಗಿದೆ ಎಂದ ಅವರು, ಹೋರಾಟದ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ರೈತರನ್ನು ಖಲಿಸ್ತಾನಿಗಳು, ಅರ್ಬನ್ ನಕ್ಸಲೈಟ್‍ಗಳೆಂದು ಕರೆಯುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ದೇಶದ ರೈತ ಸಮುದಾಯವನ್ನೇ ಅವಮಾನಿಸಿದೆ. ಕೇಂದ್ರದಲ್ಲಿ ಬಹುಮತದ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವುದರಿಂದ ಇಂತಹ ಹೇಳಿಕೆಗಳನ್ನು ಸರಕಾರ ನೀಡುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸರಕಾರ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯದಿದ್ದರೆ 2023ರವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ದೇಶದಲ್ಲಿರುವ ಎಲ್ಲ ದಲಿತ, ರೈತ ಸಂಘಟನೆಗಳು, ಎಡ ಪಕ್ಷಗಳು, ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿವೆ. ಪಂಜಾಬ್ ಹಾಗೂ ಹರ್ಯಾಣದ ರೈತರು ತಮ್ಮ ಕುಟುಂಬ ಸಮೇತರಾಗಿ ಹೋರಾಟಕ್ಕಿಳಿದಿದ್ದು, ಜ.26ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ರೈತರ ಹೋರಾಟ ಬೆಂಬಲಿಸುವ ಎಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ, ಜ.26ರ ಕಾರ್ಯಕ್ರಮದ ಅಂಗವಾಗಿ ಜಿಲ್ಲಾದ್ಯಂತ ಜನಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಿಂದ ಸುಮಾರು 500 ಮಂದಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ರೈತಸಂಘದ ಪುಟ್ಟಸ್ವಾಮಿಗೌಡ, ಕೃಷ್ಣೇಗೌಡ, ಸಂವಿಧಾನ ಸಂರಕ್ಷಣಾ ಸಮಿತಿಯ ಕೃಷ್ಣಮೂರ್ತಿ, ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ವೆಂಕಟೇಶ್, ದಸಂಸ ಮುಖಂಡ ಗಣೇಶ್, ಜನಶಕ್ತಿ ಸಂಘದ ಸುರೇಶ್ ನಾಯ್ಕ್, ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News