ಜಯಲಲಿತಾ ಆಪ್ತೆ ಶಶಿಕಲಾ ಆರೋಗ್ಯದಲ್ಲಿ ಚೇತರಿಕೆ

Update: 2021-01-21 12:27 GMT

ಬೆಂಗಳೂರು, ಜ.21: ಅನಾರೋಗ್ಯ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಿಂದ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ಅವರ ಆರೋಗ್ಯ ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ಮಧುಮೇಹ, ರಕ್ತದೊತ್ತಡ, ಹೈಪೋಥೈರಾಯ್ಡಿಸಂ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಶಿಕಲಾರನ್ನು ಬುಧವಾರ ಸಂಜೆ ಜೈಲಿನಿಂದ ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದರಿಂದ ಆಂಟಿಬಯೋಟಿಕ್ ಮತ್ತು ಆಕ್ಸಿಜನ್ (ಕೃತಕ ಉಸಿರಾಟ) ವ್ಯವಸ್ಥೆ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

ಜೈಲಿನಿಂದ ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿರುವ ಶಶಿಕಲಾ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್-19 ಸಂಬಂಧದ ವರದಿ ನೆಗೆಟಿವ್ ಬಂದಿದೆ. ಮತ್ತೊಂದೆಡೆ ಭದ್ರತಾ ದೃಷ್ಟಿಯಿಂದ ಜೈಲು ಸಿಬ್ಬಂದಿ ಜೊತೆ ಸ್ಥಳೀಯ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News