ಖಾತೆ ಹಂಚಿಕೆ ವಿಚಾರ: ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಎಂಟಿಬಿ ನಾಗರಾಜ್

Update: 2021-01-21 12:33 GMT

ಬೆಂಗಳೂರು, ಜ.21: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ವಸತಿ ಖಾತೆಯ ಜವಾಬ್ದಾರಿ ಹೊತ್ತಿದ್ದ ಎಂಟಿಬಿ ನಾಗರಾಜ್, ಇದೀಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿಯೂ ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಇದೀಗ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವ ಯಡಿಯೂರಪ್ಪ, ಎಂಟಿಬಿ ನಾಗರಾಜ್‍ಗೆ ಅಬಕಾರಿ ಖಾತೆಯ ಹೊಣೆಗಾರಿಕೆಯನ್ನು ವಹಿಸಿರುವುದರಿಂದ, ಅವರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಖಾತೆಯಲ್ಲಿ ನಾನು ಮಾಡುವಂಥದ್ದು ಏನೂ ಇಲ್ಲ. ನಾನು ಈ ಹಿಂದೆ ವಸತಿ ಸಚಿವನಾಗಿದ್ದೆ. ಸಾರ್ವಜನಿಕರಿಗೆ ಒಳ್ಳೆಯದಾಗುವ, ಬಡವರಿಗೆ ಸಹಾಯ ಮಾಡುವಂತಹ ಖಾತೆ ನಾನು ಕೇಳಿದ್ದೆ. ವಸತಿ ಖಾತೆಯಲ್ಲಾದರೆ ಮನೆ ಕೊಡುವ, ಕಾಮಗಾರಿ ಮಾಡಿಸಿಕೊಡುವ ಕೆಲಸವಿರುತ್ತದೆ. ಅಬಕಾರಿ ಖಾತೆ ಪಡೆದು ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಅಬಕಾರಿ ಖಾತೆ ಹಂಚಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಅಬಕಾರಿ ಖಾತೆ ಬೇಡ, ಬೇರೆ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ. ಇವತ್ತು ಸಂಜೆ ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ನಾಗರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News