ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಂಪುಟ ಸಭೆಗೆ ನಾಲ್ವರು ಸಚಿವರು ಗೈರು

Update: 2021-01-21 13:22 GMT

ಬೆಂಗಳೂರು, ಜ.21: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಸುಮಾರು ಒಂದೂವರೆ ವರ್ಷಗಳ ಬಳಿಕ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದು, ಆದರೆ ತಮ್ಮ ಸಂಪುಟಕ್ಕೆ ಸೇರ್ಪಡೆಯಾಗಿರುವ 7 ಮಂದಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ.

ಹಿರಿಯ ಸಚಿವರ ಖಾತೆಗಳು ಅದಲು ಬದಲು, ನೂತನ ಸಚಿವರಿಗೆ ಹಂಚಿಕೆ ಮಾಡಿರುವ ಖಾತೆಗಳ ಬಗ್ಗೆ ಅಪಸ್ವರ ಎದ್ದಿರುವುದರಿಂದ, ಮುಖ್ಯಮಂತ್ರಿಗೆ ಹೊಸ ತಲೆ ನೋವು ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಗ್ಗೆ ಮುನಿಸಿಕೊಂಡಿರುವ ನಾಲ್ವರು ಸಚಿವರಾದ ಮಾಧುಸ್ವಾಮಿ, ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ ಇಂದು ನಡೆದ ಸಚಿವ ಸಂಪುಟ ಸಭೆಗೂ ಆಗಮಿಸದೆ ದೂರ ಉಳಿದಿದ್ದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಖಾತೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದ ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿಯಿಂದ ಎರಡು ಖಾತೆಗಳನ್ನು ಹಿಂಪಡೆದು ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ವಹಿಸಿರುವ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿಯ ಎರಡನೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾಧುಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ದೂರ ಉಳಿದರು.

ಮಾಧುಸ್ವಾಮಿ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಹಾಗೂ ಸಣ್ಣ ನೀರಾವರಿ ಖಾತೆಯನ್ನು ಸಿ.ಪಿ. ಯೋಗೇಶ್ವರ್ ಗೆ ವಹಿಸಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ವಸತಿ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದ ಎಂಟಿಬಿ ನಾಗರಾಜ್, ತಮಗೆ ವಸತಿ ಖಾತೆಯನ್ನೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಮನವಿ ಮಾಡಿದ್ದರು. ಆದರೆ, ಅವರಿಗೆ ಎಚ್.ನಾಗೇಶ್ ರಾಜೀನಾಮೆಯಿಂದ ತೆರವಾಗಿರುವ ಅಬಕಾರಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ.

ಈ ಬಗ್ಗೆ ಬಹಿರಂಗವಾಗಿಯೆ ತಮ್ಮ ಅಸಮಾಧಾನ ಹೊರಹಾಕಿದ ಎಂಟಿಬಿ ನಾಗರಾಜ್, ಬಡವರಿಗೆ ಉಪಯೋಗವಾಗುವಂತಹ ಖಾತೆ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಅಬಕಾರಿ ಇಲಾಖೆಯಲ್ಲಿ ಮಾಡೋಕೆ ಏನಿದೆ? ಕಂಪನಿಗಳಿಂದ ಮದ್ಯ ಖರೀದಿಸಲಾಗುತ್ತದೆ. ಹೋಲ್‍ಸೇಲ್ ದರದಲ್ಲಿ ಡೀಲರ್ ಗಳಿಗೆ ಮದ್ಯ ಕೊಡಲಾಗುತ್ತದೆ. ಡೀಲರ್ ಗಳು ಇದನ್ನು ಅಂಗಡಿಗೆ ಮಾರಿ, ಬಂದ ಹಣವನ್ನು ಸರಕಾರಕ್ಕೆ ತಲುಪಿಸುತ್ತಾರೆ. ಇಲ್ಲಿ ನಾನು ಮಾಡುವ ಕೆಲಸ ಏನೂ ಇಲ್ಲ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದ ಕೆ.ಗೋಪಾಲಯ್ಯ, ತಮ್ಮ ಖಾತೆಯನ್ನು ಬದಲಾಯಿಸಿರುವುದರಿಂದ ಬೇಸರಗೊಂಡಿದ್ದಾರೆ. ಗೋಪಾಲಯ್ಯಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬದಲು ತೋಟಗಾರಿಕೆ ಮತ್ತು ಸಕ್ಕರೆ ಖಾತೆಯನ್ನು ವಹಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದ ಡಾ.ಕೆ.ಸುಧಾಕರ್ ಬಳಿಯಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದು ಮಾಧುಸ್ವಾಮಿಗೆ ನೀಡಲಾಗಿದೆ. ಈ ಹಿಂದೆ ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸುಧಾಕರ್ ಗೆ ವಹಿಸಲಾಗಿತ್ತು. ಅಲ್ಲದೆ, ಈ ಎರಡು ಇಲಾಖೆಗಳನ್ನು ವಿಲೀನಗೊಳಿಸುವ ಕುರಿತು ಚರ್ಚೆಗಳು ನಡೆದಿತ್ತು.

ಪೌರಾಡಳಿತ ಹಾಗೂ ತೋಟಗಾರಿಕೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಡಾ.ನಾರಾಯಣಗೌಡ ಅವರಿಂದ ಎರಡು ಖಾತೆಗಳನ್ನು ಹಿಂಪಡೆದು ಅವರಿಗೆ ಯುವಜನ ಸೇವೆ, ಕ್ರೀಡೆ ಹಾಗೂ ವಕ್ಫ್ ಮತ್ತು ಹಜ್ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಬೇಸರಗೊಂಡಿರುವ ನಾರಾಯಣಗೌಡ, ಲಾಕ್‍ಡೌನ್ ಸಂದರ್ಭದಲ್ಲಿ ನಾವು ಅತ್ಯುತ್ತಮವಾಗಿ ಕೆಲಸ ಮಾಡಿದ್ದೇವೆ. ಆದರೂ, ನಮ್ಮ ಖಾತೆಗಳನ್ನು ಬದಲಾಯಿಸಿದ್ದು ಏಕೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

ನಮ್ಮಿಂದ ಆಗಿರುವ ತಪ್ಪೇನು?: ಗೋಪಾಲಯ್ಯ

ಯಾವ ಕಾರಣಕ್ಕಾಗಿ ನನ್ನಿಂದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಹಿಂಪಡೆಯಲಾಗಿದೆ. ನಮ್ಮಿಂದ ಆಗಿರುವ ತಪ್ಪಾದರೂ ಏನು? ಅನ್ನೋದದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸುತ್ತೇನೆ.

-ಕೆ.ಗೋಪಾಲಯ್ಯ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News