ಹಿಂದುತ್ವಕ್ಕಾಗಿ 45 ವರ್ಷಗಳಿಂದ ಮನೆ ಬಿಟ್ಟ ನನಗೆ ಬಿಜೆಪಿ ಟಿಕೆಟ್ ನೀಡಲಿ: ಪ್ರಮೋದ್ ಮುತಾಲಿಕ್

Update: 2021-01-21 13:19 GMT

ಬೆಳಗಾವಿ, ಜ.21: ಸತತ 45 ವರ್ಷಗಳಿಂದ ಮನೆ ಬಿಟ್ಟ ನಾನು ಹಿಂದುತ್ವ, ಜಾಗೃತಿ, ಸಮಾಜಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದು, ಇದನ್ನು ಪರಿಗಣಿಸಿ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ನನಗೆ ಟಿಕೆಟ್ ನೀಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಮನೆ ಬಿಟ್ಟ ನಾನು, ಹಲವಾರು ಸಮಾಜದ ಜಾಗೃತಿ ಕಾರ್ಯಕ್ರಮಗಳು, ಸಂಘಟನೆಗಳಲ್ಲಿ ಭಾಗಿಯಾಗಿದ್ದೇನೆ. ಇದನ್ನು ಪರಿಗಣಿಸಿ ನನಗೆ ಬಿಜೆಪಿ ಪಕ್ಷ ಟಿಕೆಟ್ ನೀಡಬೇಕು. ಈ ಸಂಬಂಧ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದರು.

ಸರಕಾರದ ವಿರುದ್ಧ ಪ್ರತಿಭಟನೆ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನ ಹಾಗೂ ಸವದತ್ತಿ ಯಲ್ಲಮ್ಮನ ದೇವಸ್ಥಾನ ಪ್ರವೇಶಕ್ಕೆ ಈ ಕೂಡಲೇ ಅನುಮತಿ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಮಸೀದಿ, ಚರ್ಚ್‍ಗಳಿಗೆ ಪ್ರಾರ್ಥನೆ ಸಲ್ಲಿಸಲು ಸರಕಾರ ಅವಕಾಶ ಕಲ್ಪಿಸಿದೆ. ಆದರೆ, ಹಿಂದೂ ದೇವಸ್ಥಾನಗಳಿಗೆ ಮಾತ್ರ ಕೋವಿಡ್ ಹೆಸರಿನಲ್ಲಿ ನಿರ್ಬಂಧ ಹೇರಲಾಗಿದೆ. ರಾಜಕೀಯ ಸಭೆ ಸಮಾರಂಭಗಳಲ್ಲಿ ಲಕ್ಷಾಂತರ ಜನ ಸೇರಬಹುದು. ಆದರೆ ದೇವಸ್ಥಾನಗಳಿಗೆ ಬರುವಂತಿಲ್ಲ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News