ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: 75ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಹೋರಾಟ
ಬೆಂಗಳೂರು, ಜ. 21: ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿನ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಕಾರ್ಮಿಕರ ಹೋರಾಟ 75ನೆ ದಿನಕ್ಕೆ ಕಾಲಿಟ್ಟಿದೆ. ಆಡಳಿತ ಮಂಡಳಿ ಹಠಮಾರಿ ಧೋರಣೆ ಖಂಡಿಸಿ ಫೆಬ್ರವರಿ ಮೊದಲ ವಾರದಲ್ಲಿ ಹಾರೋಹಳ್ಳಿ-ಬಿಡದಿ ಕೈಗಾರಿಕಾ ಪ್ರದೇಶಗಳ ಎಲ್ಲ ಕಾರ್ಮಿಕರು ಒಂದು ದಿನದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಗುರುವಾರ ಕಾರ್ಖಾನೆ ಬಳಿ ಕಾರ್ಮಿಕರು ಮತ್ತವರ ಕುಟುಂಬದ ಸದಸ್ಯರೊಂದಿಗೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಕಾರ್ಮಿಕರು, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ನಾಯಕರು, ಆಡಳಿತ ಮಂಡಳಿ ಕೂಡಲೇ ಅಘೋಷಿತ ಲಾಕ್‍ಔಟ್(ಬೀಗಮುದ್ರೆ) ತೆರವು ಮಾಡಬೇಕು. ಯಾವುದೇ ಷರತ್ತಿಲ್ಲದೆ ಎಲ್ಲ ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು. ಅಲ್ಲದೆ, ಹೋರಾಟದ ಅವಧಿಯಲ್ಲಿನ ಕಾರ್ಮಿಕರು ಪೂರ್ಣ ವೇತನವನ್ನು ನೀಡಬೇಕು. ಇದನ್ನು ಹೊರತುಪಡಿಸಿ ಕಾರ್ಮಿಕರಿಗೆ ಲೀಗಲ್ ನೋಟಿಸ್ ನೀಡುವುದು, ಷರತ್ತಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ನಿರ್ದೇಶಿಸುವುದು, ಬಹುತೇಕ ಕೆಲಸಕ್ಕೆ ಹಾಜರಾಗಿದ್ದಾರೆಂದು ಸುಳ್ಳು ಮಾಹಿತಿ ನೀಡಿ, ಕಾನೂನು ಕ್ರಮಕ್ಕೆ ಮುಂದಾಗುವ ಬೆದರಿಕೆವೊಡ್ಡುವುದು ಮತ್ತು ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖಂಡರು, ಕಾರ್ಖಾನೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಸಮಾವೇಶದಲ್ಲಿ ಕಾರ್ಮಿಕ ಮುಖಂಡರಾದ ಎಸ್.ಕೆ.ಉಮೇಶ್, ವಿಜಯಭಾಸ್ಕರ್, ಮೈಕಲ್ ಫರ್ನಾಂಡಿಸ್, ಕಾಳಪ್ಪ, ಕಾನೂನು ಸಲಹೆಗಾರ ಮುರಳೀಧರ್, ಸೋಮಶೇಖರ್, ಷಣ್ಮುಗಂ, ಟೊಯೊಟಾ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರಸನ್ನಕುಮಾರ್ ಚೆಕ್ಕೆರೆ, ಗಂಗಾಧರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.