ಭಗವಾಧ್ವಜಗಳೊಂದಿಗೆ ಶಿವಸೇನೆ ಕಾರ್ಯಕರ್ತರಿಂದ ಕರ್ನಾಟಕ ಗಡಿ ಪ್ರವೇಶಕ್ಕೆ ಯತ್ನ: ಪೊಲೀಸರಿಂದ ತಡೆ

Update: 2021-01-21 15:27 GMT

ಬೆಳಗಾವಿ, ಜ.21: ಮಹಾನಗರಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಬಾವುಟ ಹಾರಿಸಿರುವುದನ್ನು ಖಂಡಿಸಿ, ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಭಗವಾಧ್ವಜಗಳೊಂದಿಗೆ ಕರ್ನಾಟಕ ಗಡಿ ಪ್ರವೇಶಿಸಲು ಮಾಡಿದ ಯತ್ನ ವಿಫಲವಾಯಿತು.

ಗುರುವಾರ ತಾಲೂಕಿನ ಗಡಿಯಲ್ಲಿರುವ ಶಿನ್ನೋಳಿ ಬಳಿಯಲ್ಲಿ ಜಮಾವಣೆಗೊಂಡ ನೂರಾರು ಶಿವಸೇನೆ ಕಾರ್ಯಕರ್ತರು, ಪಾಲಿಕೆ ಮುಂದಿನ ಕನ್ನಡ ಧ್ವಜವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಭಗವಾಧ್ವಜ ಸ್ಥಾಪಿಸುತ್ತೇವೆ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ಜೈ ಭವಾನಿ, ಜೈಶಿವಾಜಿ ಎಂದು ಘೋಷಣೆ ಕೂಗುತ್ತಾ ರಾಜ್ಯದತ್ತ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಸ್ಥಳದಲ್ಲಿ ತಳ್ಳಾಟ- ನೂಕಾಟ ನಡೆಯಿತು. ಇದರಿಂದ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಗಾವಿ ಪ್ರವೇಶ ನಿಷೇಧ: ಈ ನಡುವೆ, ಶಿವಸೇನೆಯ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದಾವಣೆ ಮತ್ತು ಶಿವಸೇನೆ ಕಾರ್ಯಕರ್ತರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ನಿಷೇಧ ಹೇರಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.

ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರ ಗಲಾಟೆ ಹಿನ್ನೆಲೆಯಲ್ಲಿ ಶಿನ್ನೋಳಿ ಚೆಕ್ ಪೋಸ್ಟ್ ಗೆ ಡಿಸಿಪಿ ವಿಕ್ರಂ ಆಮಟೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಮತ್ತೊಂದೆಡೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡರು ನಗರದಲ್ಲಿ ಕೈಗೊಂಡಿದ್ದ ಮೆರವಣಿಗೆಯನ್ನು ಪೊಲೀಸರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಹಾಗೂ ಅನುಮತಿ ಸಿಗದ ಕಾರಣದಿಂದ ಮುಂದೂಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಶೇಷವಾಗಿ ಮಹಾನಗರಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿರುವ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಳಗಾವಿಗೆ ಕನ್ನಡಪರ ಹೋರಾಟಗಾರರು

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗಡಿ ವಿವಾದ ಸಂಬಂಧ ನೀಡಿದ ಹೇಳಿಕೆಯ ವಿರುದ್ಧ ಪ್ರತಿಭಟಿಸಲು ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದು ನೇತೃತ್ವದ ತಂಡ ಜ.23ರಂದು ಬೆಳಗ್ಗೆ 11ಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News