ಖಾತೆ ಹಂಚಿಕೆ ಅಸಮಾಧಾನ ಶಮನಗೊಳಿಸಲು ಸಿಎಂ ಯತ್ನ: ಸಚಿವರ ಜೊತೆ ಮಾತುಕತೆ

Update: 2021-01-21 15:31 GMT

ಬೆಂಗಳೂರು, ಜ.21: ಖಾತೆಗಳ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವರಾದ ಎಂ.ಟಿ.ಬಿ.ನಾಗರಾಜ್, ಕೆ.ಗೋಪಾಲಯ್ಯರನ್ನು ಕಂದಾಯ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಗೆ ಕರೆ ತಂದು ಅಸಮಾಧಾನ ಶಮನಗೊಳಿಸುವ ಪ್ರಯತ್ನ ಮಾಡಿದರು.

ಖಾತೆಗಳ ಹಂಚಿಕೆ ಸಂಬಂಧ ಸಚಿವರಾದ ನಾಗರಾಜ್ ಹಾಗೂ ಗೋಪಾಲಯ್ಯ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈಗ ಸದ್ಯಕ್ಕೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಿ. ನಂತರ ಮುಂದಿನ ದಿನಗಳಲ್ಲಿ ನೋಡೋಣ ಎಂದರು.

ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ ಬಳಿಕ ಹೊರ ಬಂದ ಸಚಿವರಾದ ನಾಗರಾಜ್, ಗೋಪಾಲಯ್ಯ ಖಾತೆಗಳ ಹಂಚಿಕೆ ಕುರಿತು ನಮಗೆ ಯಾವುದೆ ಬೇಸರವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದರು. ಆದರೆ, ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಮುಂದುವರೆಸಿದರು.

ಸಚಿವರಿಗೆ ಅಶೋಕ್ ಕರೆ: ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿಗದಿತ ಅವಧಿಗೆ ಮುಖ್ಯಮಂತ್ರಿ ಆಗಮಿಸಿದರು. ಆದರೆ, ಸಚಿವರಾದ ನಾಗರಾಜ್, ಗೋಪಾಲಯ್ಯ, ಸುಧಾಕರ್ ಹಾಗೂ ಮಾಧುಸ್ವಾಮಿ ಗೈರು ಹಾಜರಾಗಿದ್ದನ್ನು ಗಮನಿಸಿ ಅವರಿಗೆ ಸುಮಾರು ಅರ್ಧಗಂಟೆಗಳ ಕಾಲ ಕಾದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಚಿವ ಸಂಪುಟ ಸಭೆಯಿಂದ ಹೊರ ಬಂದು ದೂರವಾಣಿ ಮೂಲಕ ನಾಗರಾಜ್ ಹಾಗೂ ಗೋಪಾಲಯ್ಯರನ್ನು ಸಂಪರ್ಕಿಸಿ ಮನವೊಲಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿ ನಿಮಗಾಗಿ ಕಾಯುತ್ತಿದ್ದಾರೆ, ಸಭೆಗೆ ಬನ್ನಿ, ಎಲ್ಲವೂ ಚರ್ಚೆ ಮಾಡೋಣ. ಈ ರೀತಿ ನೀವು ಸಂಪುಟ ಸಭೆಗೆ ಗೈರು ಹಾಜರಾದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಖಾತೆ ಬದಲಾಗುವವರೆಗೂ ಸಂಪುಟಕ್ಕೆ ಬರಲ್ಲ: ಎಂಟಿಬಿ

ತನಗೆ ನೀಡಿರುವ ಅಬಕಾರಿ ಖಾತೆಯನ್ನು ಹಿಂಪಡೆದು ವಸತಿ ಖಾತೆ ಅಥವಾ ಅದಕ್ಕಿಂತ ಮಹತ್ವದ ಖಾತೆಯನ್ನು ನೀಡಬೇಕು. ಜನಸಾಮಾನ್ಯರಿಂದ ನಿಂದನೆಗೆ ಒಳಗಾಗುವಂತಹ ಅಬಕಾರಿಯ ಜವಾಬ್ದಾರಿ ನನಗೆ ಬೇಡ. ನನ್ನ ಖಾತೆ ಬದಲಾಗುವವರೆಗೂ ನಾನು ಸಚಿವ ಸಂಪುಟ ಸಭೆಗೂ ಬರಲ್ಲ, ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳುವುದಿಲ್ಲ.

-ಎಂಟಿಬಿ ನಾಗರಾಜ್, ನೂತನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News