ರಾಜ್ಯದಲ್ಲಿ ‘ಸ್ವಚ್ಛ ಭಾರತ್ ಮಿಷನ್ ಎರಡನೆ ಹಂತ’ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ

Update: 2021-01-21 16:01 GMT

ಬೆಂಗಳೂರು, ಜ.21: ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್‍ನ ಎರಡನೆ ಹಂತವನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ 5.50 ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೈ ಮಗ್ಗ ಅಭಿವೃದ್ಧಿ ನಿಗಮನಕ್ಕೆ ದುಡಿಮೆ ಬಂಡವಾಳಕ್ಕಾಗಿ ಬ್ಯಾಂಕ್‍ನಿಂದ 31 ಕೋಟಿ ರೂ. ಸಾಲ ಮಾಡಲಾಗಿತ್ತು. ಈ ಪೈಕಿ 7 ಕೋಟಿ ರೂ.ಸಾಲ ತೀರಿಸಲಾಗಿದೆ. ಇನ್ನುಳಿದಂತಹ 24 ಕೋಟಿ ರೂ.ಗೆ ಒಂದು ವರ್ಷ ಸರಕಾರದಿಂದ ಬ್ಯಾಂಕ್ ಗ್ಯಾರಂಟಿ ಮುಂದುವರಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರು ಮತ್ತು ಮದುವೆಯಾಗಿರೊ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಅನುಮೋದನೆ ನೀಡಲಾಗಿದೆ. ರಾಜ್ಯದ 227 ತಾಲೂಕು ಕಚೇರಿ, 5 ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲು 35 ಕೋಟಿ ರೂ.ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಕರ್ನಾಟಕ ಗೃಹ ಮಂಡಳಿಯಿಂದ ಅನುಮತಿ ಪಡೆಯದ 65 ವಸತಿ ಬಡಾವಣೆಗಳನ್ನು ಒಂದು ಬಾರಿಗೆ ಸಕ್ರಮಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 44 ಹುದ್ದೆಗಳನ್ನು ತುಂಬಲು ಅನುಮೋದನೆ ನೀಡಲಾಗಿದೆ. ಅಲ್ಲದೆ, ಅಂಗನವಾಡಿ ಸಹಾಯಕಿಯರಿಗೆ ಎರಡು ಜೊತೆ ಸೀರೆ ಸಮವಸ್ತ್ರ ವಿತರಣೆ 10.27 ಕೋಟಿ ರೂ.ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದ್ದು, ಕೆಎಸ್‍ಡಿಸಿಯಿಂದ ಒಂದು ಸೀರೆಗೆ 400 ರೂ.ಗಳಂತೆ ಖರೀದಿ, ಒಟ್ಟು 1.3 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

1500 ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಿತರಣೆಗೆ 12.75 ಕೋಟಿ ರೂ.ಬಿಡುಗಡೆ ಅನುಮೋದನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆನಕೇನಹಳ್ಳಿ ಏತ ನೀರಾವರಿ ಯೋಜನೆಯಿಂದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 48 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಬೊಮ್ಮಾಯಿ ಹೇಳಿದರು.

ನಮ್ಮಲ್ಲಿ ಮೂಲ, ವಲಸಿಗ ಎಂಬುದು ಇಲ್ಲ. ಕೆಲವು ಸಮಯದಲ್ಲಿ ಖಾತೆಗಳು ಬದಲಾವಣೆಯಾಗುತ್ತವೆ. ಖಾತೆ ಹಂಚಿಕೆ ಬಗ್ಗೆ ಸಚಿವರಲ್ಲಿ ಇರುವ ಅಸಮಾಧಾನ ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿಗೆ ಇದೆ. ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News