ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ‌ ವಿವಿಧ ಕಡೆಗಳಲ್ಲಿ ಭಾರೀ ಶಬ್ದ: ಬೆಚ್ಚಿಬಿದ್ದ ಜನತೆ

Update: 2021-01-21 18:14 GMT

ಶಿವಮೊಗ್ಗ, ಜ.21: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ‌ ವಿವಿಧ ಕಡೆಗಳಲ್ಲಿ ಇಂದು ರಾತ್ರಿ ಭಾರೀ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿಗೂಢ ಶಬ್ದದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ಆರರಿಂದ ಹತ್ತು ಸೆಕೆಂಡ್ ವರೆಗೆ ಭೂಮಿ ನಡುಗಿದ ಅನುಭವವಾಗಿದ್ದು, ಘಟನೆಯಿಂದ ಭಯಭೀತರಾಗಿ ಜನರು ಮನೆಯ ಹೊರಗಡೆ ಬಂದು ನಿಂತಿರುವ ದೃಶ್ಯ ಕಂಡುಬಂದಿದೆ. ಭದ್ರಾವತಿಯಲ್ಲಿ ಶಬ್ದದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ತೆರೆದುಕೊಂಡ ಬಗ್ಗೆ ವರದಿಯಾಗಿವೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಈ ರೀತಿಯ ನಿಗೂಢ ಶಬ್ಬ ಕೇಳಿಸಿದೆ. ಇನ್ನು ಆಯನೂರಲ್ಲಿ ಭತ್ತ ಕಾಯಲು ಹೋದ ರೈತರಿಗೆ ಆಕಾಶದಲ್ಲಿ ಶಬ್ದ ಸಹಿತ ಬೆಂಕಿ ಆವರಿಸಿದ ದೃಶ್ಯ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಕೂಡಾ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಸ್ಥಳೀಯರು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಶಬ್ದ

ಜಿಲ್ಲೆಯ ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಕೆಲ ಭಾಗದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. 

ಜಿಲ್ಲೆಯ ಮಲೆನಾಡು ಭಾಗದ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸೇರಿದಂತೆ ಕೊಪ್ಪ ತಾಲೂಕಿಗೆ ಸೇರಿರುವ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭೂಮಿ ಕಂಪಿಸಿರುವುದಲ್ಲದೇ ಭಾರೀ ಸದ್ದು ಕೇಳಿ ಬಂದಿದೆ ಎಂದು ಸಾರ್ವಜನಿಕರು ತಿಳಿಸಿದ್ದು, ಭೂಮಿ ಕಂಪಿಸಿದ ವೇಳೆ ಮನೆಯ ಕಿಟಕಿ, ಪಾತ್ರೆಗಳು ನೆಲಕ್ಕುರುಳಿವೆ ಎಂದು ಮಾಹಿತಿ ನೀಡಿದ್ದಾರೆ.

ನರಸಿಂಹರಾಜಪುರ ಭಾಗದಲ್ಲಿ ಸುಮಾರು 10:30ರ ಸಮಯದಲ್ಲಿ ಭಾರೀ ಪ್ರಮಾಣದ ಸದ್ದು ಹಾಗೂ ಭೂಮಿ ಲಘುವಾಗಿ ಕಂಪಿಸಿರುವ ಅನುಭವ ಆಯಿತೆಂದು ಸಾರ್ವಜನಿಕರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಭೂಕಂಪ ಆಗುತ್ತಿದೆ ಎಂದು ಭಾವಿಸಿದ ಜನರು ಮನೆಯಿಂದ ಹೊರ ಬಂದಿರುವ ಘಟನೆಯೂ ವರದಿಯಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಮಲೆನಾಡು ಭಾಗದ ಅಲ್ಲಲ್ಲಿ ಭಾರೀ ಪ್ರಮಾಣದ ಶಬ್ದ ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಈ ಪ್ರದೇಶಗಳಿಗೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದೆ. ಈ ಮಧ್ಯೆಯೇ ಗುರುವಾರ ರಾತ್ರಿ ಮಲೆನಾಡಿನ ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಭಾರೀ ಸದ್ದು ಕೇಳಿಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News