ಸ್ಮಾರಕಗಳಿಗಾಗಿ ಬಡವರ ಮೇಲೆ ಅತಿಕ್ರಮಣ ಎಷ್ಟು ಸರಿ?

Update: 2021-01-22 05:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಲವು ವರ್ಷಗಳಿಂದ ಸ್ಮಾರ್ಟ್ ಸಿಟಿ ಕನಸನ್ನು ದೇಶದ ಜನತೆಯ ಮನದಲ್ಲಿ ಬಿತ್ತಿರುವ ಮೋದಿ ಸರಕಾರ, ದೇಶಾದ್ಯಂತ ಈ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಯನ್ನು ವ್ಯಯಿಸಿದೆ. ಸೆಪ್ಟಂಬರ್ 2020ರಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ರ್ಯಾಂಕ್ ಪಟ್ಟಿಯಲ್ಲಿ ವಾರಣಾಸಿ ನಗರ ದೇಶದಲ್ಲೇ ಪ್ರಥಮ ರ್ಯಾಂಕ್ ಗಳಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ನಗರದಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸುವುದಾಗಿ ಸರಕಾರ ಪ್ರತಿಪಾದಿಸಿದೆ. ಆದರೆ ಯಾವ ಉದ್ದೇಶಕ್ಕೆ ಮತ್ತು ಎಷ್ಟು ವೆಚ್ಚದಲ್ಲಿ ಇದನ್ನು ನಡೆಸಲಾಗುತ್ತದೆ ಎಂಬ ಪ್ರಶ್ನೆಗೆ ಸರಕಾರ ಈವರೆಗೆ ಉತ್ತರ ನೀಡಿಲ್ಲ. 2021ರ ಜನವರಿ 13ರಂದು, ಸಂಕ್ರಾಂತಿ ಹಬ್ಬದ ಸಡಗರದ ಸಂದರ್ಭದಲ್ಲೇ ವಾರಣಾಸಿಯ ತೆಲಿಯಾನ ರೈಲ್ವೆ ಹಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ನೂರಾರು ಕಾರ್ಮಿಕರ ಮನೆಗಳನ್ನು (ಇವರಲ್ಲಿ ಬಹುತೇಕ ದಲಿತ ಸಮುದಾಯದವರು) ಸರಕಾರ ನೆಲಸಮಗೊಳಿಸಿತು. ಇವರಲ್ಲಿ ಹೆಚ್ಚಿನವರಿಗೆ ಪುನರ್ವಸತಿ ಸೌಲಭ್ಯ ಸಹಿತ ಯಾವುದೇ ಪರ್ಯಾಯ ವ್ಯವಸ್ಥೆಯನ್ನ್ನೂ ಸರಕಾರ ಒದಗಿಸಿಲ್ಲ. ಕೊರೋನ ಸೋಂಕಿನ ಮಧ್ಯದಲ್ಲೇ, ಮೈಕೊರೆಯುವ ಚಳಿಗಾಲದಲ್ಲೇ ಜನರನ್ನು ಮನೆಯಿಂದ ತೆರವುಗೊಳಿಸಿರುವುದು ಅಮಾನವೀಯ ಕ್ರಮ ಮಾತ್ರವಲ್ಲ, ಸುಪ್ರೀಂಕೋರ್ಟ್ ನ ಆದೇಶದ ಉಲ್ಲಂಘನೆಯೂ ಆಗಿದೆ.

ಬಹು ಪ್ರಚಾರ ಪಡೆದ ‘ಸಬ್ ಕಾ ಸಾಥ್’ ಸಬ್ ಕಾ ವಿಕಾಸ್’ ಘೋಷವಾಕ್ಯ ಪ್ರಧಾನಿ ಮೋದಿಯ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲೇ ಬುಲ್ಡೋಜರ್ ಪಾಲಾಗಿದೆ. ಪುನರ್ವಸತಿ ಕಲ್ಪಿಸದೆ ಜನರ ಮನೆಯನ್ನು ಧ್ವಂಸಗೊಳಿಸಿರುವುದು ಇಲ್ಲಿ ಇದೇ ಮೊದಲಲ್ಲ. ಕಳೆದ 4-5 ವರ್ಷಗಳಲ್ಲಿ ವಾರಣಾಸಿಯಲ್ಲಿ ಈ ರೀತಿ ಹಲವು ಬಾರಿ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಸಂಘಟನೆಗಳು ಹಾಗೂ ಪ್ರಜಾಪ್ರಭುತ್ವ ಹಕ್ಕುಗಳ ಪರ ಹೋರಾಡುವ ಸಂಸ್ಥೆಗಳು ಹೋರಾಟ ನಡೆಸಿವೆ. ಆದರೆ ಸರಕಾರ ಅಥವಾ ಜಿಲ್ಲಾಡಳಿತ ಈ ಹೋರಾಟಗಳನ್ನು ನಿರ್ಲಕ್ಷಿಸಿವೆ. ಕೆಲವರ ತ್ಯಾಗಗಳಿಲ್ಲದೆ ದೊಡ್ಡ ಯೋಜನೆಗಳನ್ನು ರೂಪಿಸುವುದು ಸಾಧ್ಯವಿಲ್ಲ ನಿಜ. ಈ ದೇಶದ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಸಾವಿರಾರು ಜನರು ತಮ್ಮ ಮನೆ, ಭೂಮಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ದೇಶಾದ್ಯಂತ ಕೃಷಿಯನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ, ಆಹಾರದ ಕೊರತೆಗಳನ್ನು ನೀಗಿಸುವುದಕ್ಕಾಗಿ ಇಂತಹ ಯೋಜನೆಗಳು ಕೆಲವೊಮ್ಮೆ ಅನಿವಾರ್ಯ. ಆದರೆ ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರಗಳನ್ನು ನೀಡುವುದು ಮತ್ತು ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡುವುದು ಸರಕಾರದ ಕರ್ತವ್ಯ.

ಹೆಚ್ಚಿನ ಯೋಜನೆಗಳಲ್ಲಿ ಸಂತ್ರಸ್ತರು ಸೂಕ್ತ ಪರಿಹಾರಗಳನ್ನು ಪಡೆದಿಲ್ಲ. ಸರಕಾರ ಅವರಿಗೆ ನೀಡಿರುವ ಭರವಸೆಗಳೂ ಈಡೇರಿಲ್ಲ. ಕೈಗಾರಿಕಾ ಯೋಜನೆಗಳಿಗಾಗಿಯೂ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆಯಾದರೂ, ವಶ ಪಡಿಸಿಕೊಂಡ ಭೂಮಿ ಯೋಜನೆಗಳಿಗೆ ಬಳಕೆಯಾಗದೆ ಉದ್ಯಮಿಗಳಿಂದ ದುರುಪಯೋಗವಾದುದೇ ಹೆಚ್ಚು. ಒತ್ತುವರಿಯ ಮೂಲಕ ಪಡೆದ ಭೂಮಿಯನ್ನು, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಂಡ ಆರೋಪಗಳೂ ವ್ಯಾಪಕವಾಗಿವೆ. ಕೈಗಾರಿಕೆ, ಅಣೆಕಟ್ಟು ಇತ್ಯಾದಿಗಳ ಫಲಾನುಭವಿಗಳು ಪರೋಕ್ಷವಾಗಿ ದೇಶವಾಸಿಗಳೇ ಆಗಿರುವುದರಿಂದ ಮತ್ತು ಒಂದು ದೇಶ ಮುಂದುವರಿಯಬೇಕಾದರೆ ಕೃಷಿ ಮತ್ತು ಕೈಗಾರಿಕೆಗಳ ಬೆಳವಣಿಗೆಗಳು ಅತ್ಯಗತ್ಯವಾದುದರಿಂದ ಈ ಸಂದರ್ಭದಲ್ಲಿ ನಡೆಯುವ ಒತ್ತುವರಿಗಳನ್ನು, ಅತಿಕ್ರಮಣಗಳನ್ನು ಜನರು ಸಹಿಸುತ್ತಾ ಬಂದಿದ್ದಾರೆ. ಆದರೆ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಸಣ್ಣ ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ದುರ್ಬಲ ಸಮುದಾಯಕ್ಕೆ ಸೇರಿದ ಜನರ ಮನೆಗಳನ್ನು ವಶಪಡಿಸಿಕೊಳ್ಳುವುದು, ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದು ಎಷ್ಟು ಸರಿ?.

ಸ್ಮಾರ್ಟ್ ಸಿಟಿಗೂ ಬಡವರಿಗೆ, ರೈತರಿಗೆ ಯಾವುದೇ ಸಂಬಂಧವಿಲ್ಲ. ಸ್ಮಾರ್ಟ್‌ಸಿಟಿಗಳು ರೂಪುಗೊಳ್ಳುತ್ತಿರುವುದು ಶ್ರೀಮಂತರ ಅಗತ್ಯಗಳನ್ನು ಪೂರೈಸುವುದಕ್ಕಾಗಿ. ಮಧ್ಯಮವರ್ಗ ಮತ್ತು ಕೆಳವರ್ಗದ ಜನರನ್ನು ಹಂತ ಹಂತವಾಗಿ ನಗರದಿಂದ ಹೊರ ಹಾಕಿ, ಬೃಹತ್ ಉದ್ಯಮಗಳಿಗೆ, ಐಟಿ, ಬಿಟಿಗಳಿಗೆ ಪೂರಕವಾಗಿ ನಗರವನ್ನು ಕಟ್ಟುವ ಈ ಯೋಜನೆಯಿಂದ ಬಹುಸಂಖ್ಯೆಯ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಇದು, ಹೊಟ್ಟೆಗೆ ಹಿಟ್ಟಿಲ್ಲದ ದೇಶದಲ್ಲಿ ಕೆಲವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಂತಿದೆ. ಅದೂ ದುರ್ಬಲರ ಬದುಕನ್ನು ಕಿತ್ತುಕೊಳ್ಳುವ ಮೂಲಕ. ಇಂತಹ ಯೋಜನೆಗಳಿಗಾಗಿ ಜನಸಾಮಾನ್ಯರು ಯಾಕೆ ತಮ್ಮ ಮನೆ, ಭೂಮಿಗಳನ್ನು ಕಳೆದುಕೊಳ್ಳಬೇಕು? ಬದಲಿಗೆ ಅವರಿಗೆ ಸ್ಮಾರ್ಟ್ ಸಿಟಿಗಳು ಏನನ್ನು ಮರಳಿಸುತ್ತವೆ?. ಬಡವರ ಮನೆಗಳನ್ನು ಬುಲ್ಡೋಜರ್‌ಗಳಿಂದ ಉರುಳಿಸುವ ಮುನ್ನ ಸರಕಾರ ಈ ಪ್ರಶ್ನೆಗಳಿಗೆ ಉತ್ತರಿಸಬೇಕು.

ವಿಪರ್ಯಾಸವೆಂದರೆ, ಮೋದಿಯ ಆಡಳಿತ ಕಾಲದಲ್ಲಿ ಕೈಗಾರಿಕೆ, ಕೃಷಿ ಇತ್ಯಾದಿಗಳ ಜೊತೆಗೆ ಸಂಬಂಧವೇ ಇಲ್ಲದ ಅನುತ್ಪಾದಕ ಸ್ಮಾರಕಗಳಿಗಾಗಿ, ಪ್ರತಿಮೆಗಳಿಗಾಗಿ, ಮಂದಿರಗಳಿಗಾಗಿ ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪಟೇಲ್ ಪ್ರತಿಮೆಗಾಗಿ ಹಲವು ದಲಿತರು, ಬುಡಕಟ್ಟು ಜನರು ಗುಜರಾತ್‌ನಲ್ಲಿ ತಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಯಿತು. ಈ ಪ್ರತಿಮೆಯಿಂದ ಅವರ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಪಟೇಲರೇನಾದರೂ ಬದುಕಿದ್ದರೆ ಅವರು, ಬಡವರ ಗೋರಿಗಳ ಮೇಲೆ ತನ್ನ ಪ್ರತಿಮೆಯನ್ನು ನಿಲ್ಲಿಸುವುದನ್ನು ಸಹಿಸುತ್ತ್ತಿರಲಿಲ್ಲ. ವಿವಾದಿತ ಬಾಬರಿ ಮಸೀದಿ ಧ್ವಂಸಗೊಂಡ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಸೀದಿಯಿದ್ದ ಸ್ಥಳದಲ್ಲಿ ಮಂದಿರ ಎಷ್ಟು ಸರಿ? ಎಂದು ಇನ್ನೂ ಕೆಲವರು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆ ಈಗ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಆದರೆ ಇದೇ ಸಂದರ್ಭದಲ್ಲಿ ಬೃಹತ್ ರಾಮಮಂದಿರಕ್ಕಾಗಿ ನೂರಾರು ಎಕರೆ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳುತ್ತಿದೆ. ಇವೆಲ್ಲ ಸ್ಥಳೀಯ ಹಿಂದುಳಿದವರ್ಗ ಮತ್ತು ದಲಿತರಿಗೆ ಸೇರಿದ ಜಮೀನುಗಳಾಗಿವೆ.

ರಾಮಮಂದಿರಕ್ಕಾಗಿ ತಮ್ಮನ್ನು ಬೀದಿ ಪಾಲು ಮಾಡುತ್ತಿರುವ ಸರಕಾರದ ಕ್ರಮವನ್ನು ಸ್ಥಳೀಯರು ಈಗಾಗಲೇ ಪ್ರಶ್ನಿಸಲು ಶುರು ಹಚ್ಚಿದ್ದಾರೆ. ಮಂದಿರವಿರಲಿ, ಮಸೀದಿಯಿರಲಿ ಇನ್ನೊಬ್ಬರ ಭೂಮಿಯನ್ನು ಅವರ ಅನುಮತಿಯಿಲ್ಲದೆ, ಬಲವಂತವಾಗಿ ಕಿತ್ತುಕೊಂಡು ನಿರ್ಮಾಣ ಮಾಡುವುದು ಕಾನೂನು ಪ್ರಕಾರ ಮಾತ್ರವಲ್ಲ, ಧಾರ್ಮಿಕ ನೆಲೆಯಲ್ಲಿಯೂ ತಪ್ಪೇ ಆಗಿದೆ. ಒಂದು ವೇಳೆ ಬಾಬರ್‌ನು ನಿಜಕ್ಕೂ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಬಾಬರಿ ಮಸೀದಿ ನಿರ್ಮಾಣ ಮಾಡಿರುವುದೇ ಆಗಿದ್ದರೆ, ಅಲ್ಲಿ ನಡೆಸುವ ನಮಾಝ್‌ನ್ನು ದೇವರು ಸ್ವೀಕರಿಸುವುದು ಸಾಧ್ಯವಿಲ್ಲ. ಹಾಗೆಯೇ, ಇನ್ನೊಂದು ಮಸೀದಿಯನ್ನು ಅಕ್ರಮವಾಗಿ ಉರುಳಿಸಿ ಅಥವಾ ಬಡವರ ಭೂಮಿಯನ್ನು ಅತಿಕ್ರಮಣ ಮಾಡಿ ಬೃಹತ್ ರಾಮಮಂದಿರ ನಿರ್ಮಾಣ ಮಾಡಿದರೆ, ಅಲ್ಲಿ ರಾಮನಿರಲು ಸಾಧ್ಯವಿಲ್ಲ. ದೇವಸ್ಥಾನ, ಮಸೀದಿಗಳು ಜನರ ಬದುಕನ್ನು ಅರಳಿಸುವುದಕ್ಕಾಗಿ ಇರುವುದೇ ಹೊರತು, ಅವರ ಬದುಕನ್ನು ಮುದುಡಿಸುವುದಕ್ಕಾಗಿಯಲ್ಲ. ಈ ನಿಟ್ಟಿನಲ್ಲಿ ಬಾಬರ್ ದೇವಸ್ಥಾನವನ್ನು ಸಾವಿರಾರು ವರ್ಷಗಳ ಹಿಂದೆ ಧ್ವಂಸಗೈದು ಅಲ್ಲಿ ಮಸೀದಿ ನಿರ್ಮಿಸಿದ ಎಂದು ಆ ಮಸೀದಿಯನ್ನು ಮತ್ತೆ ಧ್ವಂಸಗೈದು ಅಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಹೊಣೆ ಹೊತ್ತವರು, ಯಾವುದೇ ಬಡವರ ಮನೆಗಳನ್ನು ಧ್ವಂಸಗೈದು ಅಲ್ಲಿ ಮಂದಿರ ನಿರ್ಮಾಣವಾಗದಂತೆ ಜಾಗರೂಕತೆ ವಹಿಸಬೇಕಾಗಿದೆ. ಇಲ್ಲವಾದರೆ ಬಡವರ ಬದುಕನ್ನು ನಾಶ ಮಾಡಿದ ಕಳಂಕವನ್ನು ರಾಮ ಹೊತ್ತುಕೊಳ್ಳಬೇಕಾಗುತ್ತದೆ. ಆ ಕಳಂಕ, ಅಗಸನ ಮಾತು ಕೇಳಿ ಸೀತೆಯನ್ನು ಕಾಡಿಗೆ ಅಟ್ಟಿದ್ದಕ್ಕಿಂತಲೂ ದೊಡ್ಡದು ಎನ್ನುವುದನ್ನು ರಾಮಭಕ್ತರು ಅರಿತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News