ತೆಲಂಗಾಣ:ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10 ಮೀಸಲಾತಿ ಘೋಷಣೆ

Update: 2021-01-21 18:35 GMT

ಹೈದರಾಬಾದ್,ಜ.21: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು,ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ತನ್ನ ಸರಕಾರದ ನಿರ್ಣಯವನ್ನು ಗುರುವಾರ ಇಲ್ಲಿ ಪ್ರಕಟಿಸಿದರು.

  ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿಯನ್ನು ಜಾರಿಗೊಳಿಸುವ ಅಗತ್ಯವಿದ್ದು,ಈ ಬಗ್ಗೆ ನಾವು ನಿರ್ಣಯವನ್ನು ಕೈಗೊಂಡಿದ್ದೇವೆ. ಈಗಾಗಲೇ ಮೀಸಲಾತಿ ಸೌಲಭ್ಯಗಳನ್ನು ಅನುಭವಿಸುತ್ತಿರುವವರಿಗೆ ಅವು ಮುಂದುವರಿಯಲಿವೆ. ರಾಜ್ಯದಲ್ಲಿ ದುರ್ಬಲ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿಯಿದ್ದು,ಆರ್ಥಿವಾಗಿ ದುರ್ಬಲ ವರ್ಗಗಳಿಗೆ ಶೇ.10 ಮೀಸಲಾತಿಯೊಂದಿಗೆ ಇದು ಶೇ.60ಕ್ಕೇರಲಿದೆ. 2-3 ದಿನಗಳಲ್ಲಿ ಉನ್ನತ ಮಟ್ಟದ ಸಭೆಯ ಬಳಿಕ ವಿಧ್ಯುಕ್ತ ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.

 ಜ.30ರೊಳಗೆ ಆರ್ಥಿವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ರಾಜ್ಯದಲ್ಲಿಯ ಮೇಲ್ಜಾತಿಗಳ ಸಮುದಾಯಗಳು ಎರಡು ದಿನಗಳ ಹಿಂದೆ ಬೆದರಿಕೆಯೊಡ್ಡಿದ್ದವು.

ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಒಬಿಸಿಗಳಿಗೆ ಒದಗಿಸಲಾಗಿರುವ ಶೇ.50 ಮೀಸಲಾತಿಗೆ ತೊಂದರೆಯಾಗದಂತೆ ಸಂವಿಧಾನಕ್ಕೆ 103ನೇ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10 ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರವು 2019,ಜನವರಿಯಲ್ಲಿ ನಿರ್ಧರಿಸಿತ್ತು. ವಾರ್ಷಿಕ ಆದಾಯ ನಾಲ್ಕು ಲ.ರೂ.ಗಳನ್ನು ಮೀರದ ಕುಟುಂಬಗಳ ಅರ್ಜಿದಾರರು ಮೀಸಲಾತಿಗೆ ಅರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News