ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಗೆ ನೇಮಕಗೊಂಡ ಅಲಪ್ಪುಝ ಮೂಲದ ಮಹಿಳೆ ಬಗ್ಗೆ ಗೊತ್ತೇ?

Update: 2021-01-22 05:23 GMT

ಅಲಪ್ಪುಝ: ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ ಕೇರಳದ ಅಲಪ್ಪುಝ ಜಿಲ್ಲೆಯ ಕಣ್ಣನ್‌ಕಾರಾ ಗ್ರಾಮದ ಜನತೆ ಸಂಭ್ರಮಿಸಿದರು. ಅಮೆರಿಕಕ್ಕೂ ಈ ಪುಟ್ಟ ಗ್ರಾಮಕ್ಕೂ ಏನು ಸಂಬಂಧ ಎಂದು ಹುಬ್ಬೇರಿಸಬೇಡಿ.. ಈ ಪುಟ್ಟ ಗ್ರಾಮದ ಮೊಮ್ಮಗಳು ಬೈಡನ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ)ಯ ಉನ್ನತ ಹುದ್ದೆಗೆ ನೇಮಕಗೊಂಡಿರುವುದೇ ಗ್ರಾಮಸ್ಥರ ಖುಷಿಗೆ ಕಾರಣ.

ಜೇಮ್ಸ್ ಕಲಾಥಿಲ್ ಮತ್ತು ತೈಪೆ ಪ್ರಜೆ ಲೂಸಿಯಾ ಅವರ ಪುತ್ರಿ ಶಾಂತಿ ಕಲಾಥಿಲ್ ಅವರನ್ನು ಎನ್‌ಎಸ್‌ಸಿಯ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಸಂಯೋಜಕರನ್ನಾಗಿ ಬೈಡನ್ ನೇಮಕ ಮಾಡಿದ್ದಾರೆ.

ಅಮೆರಿಕದಲ್ಲೇ ಹುಟ್ಟಿ ಬೆಳೆದ ಶಾಂತಿ(49) ಅವರು ನ್ಯಾಶನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಅಂತಾರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಧ್ಯಯನ ವೇದಿಕೆಯ ಹಿರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದು ನಮ್ಮ ಕುಟುಂಬ ಹಾಗೂ ಗ್ರಾಮಕ್ಕೆ ಸಿಕ್ಕಿದ ಉಡುಗೊರೆ ಎಂದು ಶಾಂತಿಯವರ ಚಿಕ್ಕಪ್ಪ ಪಾಪಚ್ಚನ್ ಕಲಾಥಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

"ನಮ್ಮ ಅಣ್ಣ ಜೇಮ್ಸ್ ಹಾಗೂ ನಾನು 40 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದೆವು. ಹಲವು ವಿವಿಗಳಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಶಾಂತಿ ಓದಿನಲ್ಲಿ ಜಾಣೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪತ್ರಿಕೋದ್ಯಮ ಪದವೀಧರೆ. ಪ್ರಜಾಪ್ರಭುತ್ವದ ಮೌಲ್ಯಗಳ ಪ್ರತಿಪಾದಕಿಯಾಗಿರುವ ಆಕೆಗೆ ಈ ಹೊಸ ಹೊಣೆಗಾರಿಕೆ ನಿಜಕ್ಕೂ ದೊಡ್ಡ ಉಡುಗೊರೆ" ಎಂದು ಫೆಡರೇಷನ್ ಆಫ್ ಕೇರಳ ಅಸೋಸಿಯೇಶನ್ಸ್ ಇನ್ ನಾರ್ಥ್ ಅಮೆರಿಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಪಾಪಚ್ಚನ್ ಬಣ್ಣಿಸಿದರು.

ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್‌ನ ಸೀನಿಯರ್ ಡೆಮಾಕ್ರಸಿ ಫೆಲೊ ಆಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಶಾಂತಿ, ಕಾರ್ನೇಜ್ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು. ಜಾರ್ಜ್‌ಟೌನ್ ವಿವಿಯ ಇನ್‌ಸ್ಟಿಟ್ಯೂಟ್ ಫಾರ್ ದ ಸ್ಟಡಿ ಆಫ್ ಡಿಪ್ಲೊಮೆಸಿ ಜತೆಗೆ ಗುರುತಿಸಿಕೊಂಡಿರುವ ಅವರು, ವಿಶ್ವಬ್ಯಾಂಕ್ ಸಲಹೆಗಾರ್ತಿಯೂ ಆಗಿದ್ದಾರೆ.

ರಾಜತಾಂತ್ರಿಕತೆ, ಅಭಿವೃದ್ಧಿ ಮತ್ತು ಮಾಹಿತಿ ಯುಗದಲ್ಲಿ ಭದ್ರತೆ, ಸ್ವತಂತ್ರ ಮಾಧ್ಯಮ ಅಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಹಲವು ಕೃತಿಗಳನ್ನೂ ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News