ಕೋವಿಡ್‌ ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಆರೋಗ್ಯ ಕಾರ್ಯಕರ್ತರು: ಕೆಲವರ ಸುಳ್ಳು, ಇನ್ನು ಕೆಲವರ ನಾಟಕ

Update: 2021-01-22 06:19 GMT

ಬೆಂಗಳೂರು,ಜ.22: ಕೋವಿಡ್ ಲಸಿಕೆ ನೀಡಿಕೆ ಅಭಿಯಾನ ಆರಂಭಗೊಂಡು ಆರನೇ ದಿನವಾದ ಗುರುವಾರದಂದೂ ಹಲವೆಡೆ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂಜರಿಯುತ್ತಿರುವುದು ಮುಂದುವರಿದಿದೆ ಎಂದು timesofindia.com ವರದಿ ಮಾಡಿದೆ.

ಬೆಂಗಳೂರಿನಲ್ಲಿ ಕೆಲ ಆರೋಗ್ಯ ಕಾರ್ಯಕರ್ತರು ತಾವು ಅದಾಗಲೇ ಲಸಿಕೆ ಪಡೆದುಕೊಂಡಿದ್ದೇವೆ ಎಂದು ಸುಳ್ಳು ಹೇಳಿದರೆ ಹೈದರಾಬಾದ್‍ನ ಕೆಲ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕಿದ್ದ ಕೆಲವರು ಅಲ್ಲಿಗೆ ಆಗಮಿಸಿಲ್ಲ.

ತಾವು ಅದಾಗಲೇ ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಆರೋಗ್ಯ ಕಾರ್ಯಕರ್ತರು ಹೇಳಿದ ಕನಿಷ್ಠ 20 ಪ್ರಕರಣಗಳು ತಮಗೆ  ತಿಳಿದು ಬಂದಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. "ಒಬ್ಬ ವೈದ್ಯಾಧಿಕಾರಿಯಂತೂ ತಾನು ಲಸಿಕೆ ಪಡೆದುಕೊಂಡಿದ್ದೇನೆಂದು ತೋರ್ಪಡಿಸಲು  ಹತ್ತಿಯ ತುಂಡೊಂದನ್ನು ತನ್ನ ಕೈಗೆ  ಅಂಟಿಸುವಂತೆ ನರ್ಸ್‍ಗೆ ಸೂಚಿಸಿದ್ದರು," ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‍ನಲ್ಲಿ ಸರಕಾರಿ ಆಸ್ಪತ್ರೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ  ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶೇ 10ರಿಂದ 15ರಷ್ಟು ಸಿಬ್ಬಂದಿ ಲಸಿಕೆ ಅಭಿಯಾನ ಆರಂಭಗೊಂಡ ಜನವರಿ 16ರಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. "ಕೆಲ ಸಿಬ್ಬಂದಿ ರಜೆಯಲ್ಲಿದ್ದರೆ ಇನ್ನು ಕೆಲವರು ತಾವು ಲಸಿಕೆ ಹಾಕಬೇಕಿದ್ದ ದಿನ ಆಗಮಿಸಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವರಂತೂ ತುರ್ತು ಕಾರಣ ನೀಡಿ  ರಜೆಯಲ್ಲಿ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News