ಶಿವಮೊಗ್ಗ ದುರಂತ: ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Update: 2021-01-22 14:15 GMT

ಬೆಂಗಳೂರು, ಜ.22: ಶಿವಮೊಗ್ಗದ ಕಣ್ಣಳತೆ ದೂರದಲ್ಲಿರುವ ಹುಣಸೋಡು ಗ್ರಾಮದ ಬಳಿ ಸಂಗ್ರಹಿಸಿದ್ದ ಜೆಲೆಟಿನ್ ಕಡ್ಡಿ ಮತ್ತು ಡೈನಮೈಟ್‌ಗಳು ಜ.21ರಂದು ರಾತ್ರಿ ಸ್ಫೋಟಗೊಂಡು ಆರಕ್ಕೂ ಹೆಚ್ಚು ಮಂದಿ ಕಾರ್ಮಿಕರ ದುರ್ಮರಣ ಹೊಂದಿದ್ದು ಮತ್ತು ಹಲವಾರು ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆಂಬ ವಿಚಾರ ಆಘಾತಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಮತ್ತು ಮತ್ತೊಬ್ಬರು ಪ್ರಭಾವಿ ಸಚಿವರು ಇರುವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದು ಅಚಾನಕ್ಕಾಗಿ ನಡೆದ ಘಟನೆ ಅಲ್ಲ. ಈ ಹಿಂದೆ ಅಲ್ಲಿನ ಅನೇಕ ಪ್ರಜ್ಞಾವಂತ ನಾಗರಿಕರು, ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಮಣಿದು ಅಧಿಕಾರಿಗಳು ಅಕ್ರಮ ನಡೆಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿದರೆ, ‘ನಿಮ್ಮ ಮತ್ತು ನಿಮ್ಮ ಊರಿನ ಒಳ್ಳೆಯದಕ್ಕೆ ಕಣ್ಣು ಮುಚ್ಚಿಕೊಂಡಿರಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇವಲ ಕ್ರಷರ್ ನಡೆಸಲು ಅನುಮತಿ ಪಡೆದು ಮುನ್ನೂರು ಅಡಿ ಆಳದವರೆಗೂ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಭದ್ರಾ ಅಣೆಕಟ್ಟಿನಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದ ಮತ್ತು ತೀವ್ರತೆ 100 ಕಿಲೋಮೀಟರ್‌ವರೆಗೂ ಇತ್ತು ಎಂದು ಜನ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಡೀ ದಕ್ಷಿಣ ಭಾರತಕ್ಕೆ ಜೀವನಾಡಿ ಆಗಿರುವ ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯದ ತಪ್ಪಲಿನಲ್ಲಿ ಮೂರು ದೊಡ್ಡ ದೊಡ್ಡ ಅಣೆಕಟ್ಟುಗಳಿವೆ. ಈ ಅಣೆಕಟ್ಟುಗಳಿಗೆ ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಇಡೀ ದಕ್ಷಿಣ ಭಾರತವೆ ಭೀಕರ ದುರಂತಕ್ಕೆ ಸಾಕ್ಷಿ ಆಗುತ್ತದೆ. ಈ ಕುರಿತು ಸಾಮಾನ್ಯ ಜ್ಞಾನವೂ ಇಲ್ಲದೆ ಗಣಿಗಾರಿಕೆ ನಡೆಸುತ್ತಿರುವುದು ಅಕ್ಷಮ್ಯವಾದ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು, ‘ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ. ಇಲ್ಲಿ ನೂರಾರು ಅಕ್ರಮ ಕ್ರಷರ್‌ಗಳಿವೆ. ಮರಳು ಮತ್ತು ಗಣಿ ಮಾಫಿಯಾ ಕೆಲಸ ಮಾಡುತ್ತಿದೆ. ಮರಳು ಮಾಫಿಯಾ ಮೇಲೆ ದಾಳಿ ನಡೆಸುತ್ತಿದ್ದ ತಹಶೀಲ್ದಾರ್ ಅವರನ್ನು ಶಿವಮೊಗ್ಗದಿಂದ ವರ್ಗಾವಣೆ ಮಾಡಲಾಯಿತು’ ಎಂದು ತೀವ್ರ ಆರೋಪ ಮಾಡಿದ್ದಾರೆ. ಈ ಆರೋಪವು ಸರಕಾರದ ಭ್ರಷ್ಟ ಮತ್ತು ದುಷ್ಟ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಗಾರಿದ್ದಾರೆ.

ಸರಕಾರ ನಡೆಸುವ ಯಾವುದೆ ರೀತಿಯ ತನಿಖೆಗಳಿಂದ ಸತ್ಯ ಹೊರಗೆ ಬರಲಾರದು. ಏಕೆಂದರೆ ಸರಕಾರ ನಡೆಸುವವರೆ ಈ ಮಾಫಿಯಾದಲ್ಲಿ ಭಾಗಿ ಆಗಿದ್ದಾರೆ ಎಂಬ ಅರ್ಥದಲ್ಲಿ ಆಯನೂರು ಮಂಜುನಾಥ್ ಮಾತನಾಡಿದ್ದಾರೆ. ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದು ಒತ್ತಾಯಿಸಿರುವ ಸಿದ್ದರಾಮಯ್ಯ, ಸರಕಾರದ ಬೇಜವಾಬ್ದಾರಿತನದಿಂದ ಮಡಿದಿರುವ ಎಲ್ಲ ಕಾರ್ಮಿಕರ ಕುಟುಂಬಗಳಿಗೆ ನ್ಯಾಯಯುತವಾದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಕಾರ್ಮಿಕರಿದ್ದರೆ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗಗಳನ್ನು ನೀಡಬೇಕು. ಸ್ಫೋಟದಿಂದಾಗಿ ಹಾನಿಯಾಗಿರುವ ಮನೆಗಳನ್ನು ಸರಕಾರವೇ ಕಟ್ಟಿಸಿಕೊಡಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಅಕ್ರಮವಾಗಿ ನಡೆಯುತ್ತಿರುವ ಎಲ್ಲ ಗಣಿಗಾರಿಕೆಗಳನ್ನೂ ಈ ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕು ಹಾಗೂ ಘಟನೆಗೆ ಮತ್ತು ಅಕ್ರಮ ಗಣಿಗಾರಿಕೆಗೆ ಕಾರಣಕರ್ತರಾದ ಸರಕಾರಿ ಅಧಿಕಾರಿಗಳಿಗೆ ಕಠಿಣ ರೀತಿಯ ಶಿಕ್ಷೆ ವಿಧಿಸಬೇಕೆಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News