ಸಾಹಿತಿ ಹಂ.ಪ.ನಾಗರಾಜಯ್ಯ ವಿಚಾರಣೆ: ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಂಡ್ಯ ಎಸ್ಪಿ ಕೆ.ಪರಶುರಾಮ್

Update: 2021-01-22 14:41 GMT

ಬೆಂಗಳೂರು, ಜ. 22: ‘ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಹಿರಿಯ ನಾಗರಿಕರಾಗಿದ್ದು, ಅವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಭವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ' ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

ಶುಕ್ರವಾರ ಹಂಪನಾ ಪೊಲೀಸರ ವಿಚಾರಣೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕಟಣೆ ಹೊರಡಿಸಿರುವ ಎಸ್ಪಿ, ‘ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಮಂಡ್ಯ ಉಪವಿಭಾಗದ ಡಿಎಸ್ಪಿ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕಾನೂನು ಅನುಸಾರ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.

ಜ.17ರಂದು ಮಂಡ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಹಂಪನಾ ಪ್ರಧಾನಿ ಮೋದಿಯವರ ಕುರಿತು ಅವಹೇನಕಾರಿಯಾಗಿ ಮಾತನಾಡಿದ್ದು, ಜನತೆಗೆ ತಪ್ಪು ಸಂದೇಶ ನೀಡಿದ್ದಾರೆಂದು ಅವರ ವಿರುದ್ಧ ಮಾ.ಸಿ.ರವಿ ಎಂಬವರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಜ.21ರಂದು ಹಂಪನಾ ಮಂಡ್ಯ ನಗರ ಪಶ್ಚಿಮ ಠಾಣೆಗೆ ಹಾಜರಾಗಿ ತಾವು ಮಾಡಿದ ಭಾಷಣದಲ್ಲಿ ರೈತರ ಹೋರಾಟವನ್ನು ಪ್ರಸ್ತಾಪಿಸಿ ಮಾತನಾಡಿದ್ದು, ‘ಪ್ರಚೋದನಕಾರಿ ಮಾತುಗಳನ್ನಾಡಿರುವುದಿಲ್ಲ. ನನಗೆ ಪ್ರಧಾನಿ ಬಗ್ಗೆ ಅಪಾರ ಗೌರವವಿದೆ. ಅವರು ನಮ್ಮ ಹೆಮ್ಮೆಯ ರಾಷ್ಟ್ರ ನಾಯಕರು ಎಂದು ಹೇಳಿಕೆ ನೀಡಿರುತ್ತಾರೆ' ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News