ಬಿಜೆಪಿ ನಾಯಕರ ಹೆಸರಿನಲ್ಲಿ ವಂಚನೆ ಪ್ರಕರಣ: ಯುವರಾಜ್ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

Update: 2021-01-22 14:59 GMT

ಬೆಂಗಳೂರು, ಜ.22: ಬಿಜೆಪಿ ನಾಯಕರ ಹೆಸರಿನಲ್ಲಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಒಡೆತನದ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ನಗರದ 67ನೆ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಆರೋಪಿ ಯುವರಾಜ್, ಪ್ರಮುಖ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಗಣ್ಯರಿಂದ ಕೋಟ್ಯಂತರ ರೂಪಾಯಿ ಈತ ವಸೂಲಿ ಮಾಡಿ, ತದನಂತರ ಮೊಬೈಲ್ ಸಂಪರ್ಕ ಕಡಿತಗೊಳಿಸಿ ವಂಚನೆ ಮಾಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಬೆಂಗಳೂರು, ಮಂಡ್ಯ, ಮದ್ದೂರಿನಲ್ಲಿ 26 ಆಸ್ತಿಗಳ ಮಾಹಿತಿ ಸಂಗ್ರಹಿಸಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಅಫಿಡವಿಡ್ ಸಲ್ಲಿಕೆಯಾಗಿತ್ತು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ ನ್ಯಾ.ಕಾತ್ಯಾಯಿನಿ ಅವರು ಯುವರಾಜ್ ಹಾಗೂ ಪತ್ನಿ ಪ್ರೇಮಾ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿದ ಸರಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಬಹುತೇಕ ಎಲ್ಲ ಆಸ್ತಿಗಳನ್ನು ಯುವರಾಜ್ ತನ್ನ ಪತ್ನಿ ಹೆಸರಿನಲ್ಲಿ ಗಳಿಸಿದ್ದಾರೆ. ಸಾರ್ವಜನಿಕರಿಗೆ, ಸರಕಾರಕ್ಕೆ ವಂಚಿಸಿ ಆಸ್ತಿ ಸಂಪಾದನೆ ಮಾಡಿರುವ ಆಸ್ತಿಗಳು ಇವಾಗಿವೆ. ಅಲ್ಲದೆ, ಯಾವುದೇ ಸಂಪಾದನೆ ಇಲ್ಲದಿದ್ದರೂ ಅಕ್ರಮವಾಗಿ ಹಣ ಗಳಿಸಿ ಆಸ್ತಿ ಮಾಡಿದ್ದಾನೆ ಎಂದು ಆರೋಪಿಸಿದರು.

ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸೇರಿದಂತೆ 14 ಪ್ರಕರಣಗಳಲ್ಲಿ ಬೇರೆ ಬೇರೆ ಆಮಿಷವೊಡ್ಡಿ ಅಕ್ರಮವಾಗಿ ಹಣವನ್ನು ಪಡೆದಿದ್ದಾನೆ. ಇನ್ನು, ಸಿಸಿಬಿ ಪೊಲೀಸರು ಕಲೆ ಹಾಕಿ ನೀಡಿದ್ದ ದಾಖಲೆಗಳನ್ನು ನ್ಯಾಯಾಲಯ ಮನ್ನಿಸಿದೆ. ಹೀಗಾಗಿ, ಯುವರಾಜ್‍ಗೆ ಹಣ ಕೊಟ್ಟು ಮೋಸ ಹೋದವರಿಗೆ ಪರಿಹಾರ ಒದಗಿಸಲು ನ್ಯಾಯಾಲಯದ ಆದೇಶ ಮಹತ್ವದ್ದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News