ನನ್ನ ಹೇಳಿಕೆಗೆ ಈಗಲೂ ಬದ್ಧ, ಸೇಡಿನ ಮನೋಭಾವ ಒಳ್ಳೆಯದಲ್ಲ: ಹಂ.ಪ.ನಾಗರಾಜಯ್ಯ

Update: 2021-01-22 15:34 GMT

ಬೆಂಗಳೂರು, ಜ.22: ರೈತರ ಹೋರಾಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತಿಸಬೇಕಿತ್ತು ಎನ್ನುವ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ. ಆದರೆ, ಆಡಳಿತ ನಡೆಸುವವರಿಗೆ ಸೇಡಿನ ಮನೋಭಾವ ಒಳ್ಳೆಯದಲ್ಲ, ನಮ್ಮನ್ನು ಹತ್ತಿಕ್ಕುವ ಪ್ರಯತ್ನವೂ ಸರಿಯಲ್ಲ ಎಂದು ಹಿರಿಯ ಹಂ.ಪ.ನಾಗರಾಜಯ್ಯ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಕುರಿತ ಹೇಳಿಕೆವೊಂದರ ಸಂಬಂಧ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ ಬೆಳವಣಿಗೆ ಕುರಿತು “ವಾರ್ತಾಭಾರತಿ” ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಜ.17ರಂದು ಮಂಡ್ಯದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಉಪನ್ಯಾಸ ನೀಡುವಾಗ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಎರಡು ತಿಂಗಳಿನಿಂದ ಚಳಿ, ಮಳೆ ಲೆಕ್ಕಿಸದೆ ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಶೀಲರಾಗಿರುವ ನಡೆ ಹೆಚ್ಚು ಕಾಡಿತು. ಅಲ್ಲದೆ, ಅನ್ನದಾತರು, ಈಗಾಗಲೇ ಕೇಂದ್ರ ಸರಕಾರದ ಜತೆ 9 ಸುತ್ತಿನ ಮಾತುಕತೆಯೂ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಸಮಸ್ಯೆಗೆ ಸೂಕ್ತ, ಸುಲಭ ರೀತಿಯಲ್ಲಿ ಪರಿಹಾರ ಆಗಬೇಕಿತ್ತು. ಇದಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಂಶಯ, ಸಮಸ್ಯೆಗಳನ್ನು ಆಲಿಸಬೇಕಿತ್ತು. ಇದನ್ನೇ ನಾನು ರೈತರ ಪರವಾಗಿ ಮಾನವೀಯ ದೃಷ್ಟಿಯಿಂದ ಹೇಳಿದ್ದೇನೆ ಎಂದರು.

ಇನ್ನು, ಸರಕಾರ ರಚಿಸಿರುವ ಸಮಿತಿ, ನಿಯಮಗಳಲ್ಲಿ ರೈತರಿಗೆ ವಿಶ್ವಾಸ ಮೂಡಿಲ್ಲ. ಸರಕಾರದಿಂದ ಆತಂಕಗೊಂಡಿರುವ ರೈತಾಪಿ ವರ್ಗ, ಎಲ್ಲಿ ನಮ್ಮ ಮೇಲೆ ಶೋಷಣೆ ಮಾಡುತ್ತಾರೋ ಎನ್ನುವ ಮನೋಭಾವ ಹೊಂದಿದ್ದಾರೆ. ಇದನ್ನು ದೂರವಾಗಿಸಲು ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಹೆಜ್ಜೆ ಇಡಬಹುದಾಗಿತ್ತು. ಸಮಸ್ಯೆಗಳ ಕುರಿತು ಸರಕಾರದ ಆಲೋಚನೆ ಏನು ಎಂಬುವುದನ್ನು ಕೇಳಿ ಬಗೆಹರಿಸಬೇಕಿತ್ತು.

ಜತೆಗೆ, ವಿನಯಶೀಲರಾಗಿ ಮಾತನಾಡಿದ್ದರೆ, ಇಷ್ಟು ಸಮಸ್ಯೆ ಉಲ್ಬಣ ಆಗುತ್ತಿರಲಿಲ್ಲ. ಈಗ ಪರಿಸ್ಥಿತಿ ಕೈಮೀರಿದ್ದು, ದಿನದಿಂದ ದಿನಕ್ಕೆ ರೈತರು ಹತಾಶರಾಗಿದ್ದಾರೆ. ತಮಗೆ ಅನ್ಯಾಯವಾಗಲಿದೆ ಎನ್ನುವ ಗುಮಾನಿ ಮತ್ತಷ್ಟು ಮನೆ ಮಾಡಿದೆ. ಇದಕ್ಕೆ ಇತ್ತೀಚಿಗೆ ಸಮಿತಿಯನ್ನು ತಿರಸ್ಕರಿಸಿರುವುದೇ ತಾಜಾ ಉದಾಹರಣೆಯಾಗಿದೆ ಎಂದು ನುಡಿದರು.

ಇವೆಲ್ಲಾ ಬೆಳವಣಿಗೆ ದೃಷ್ಟಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ನೋಡಲಿಕ್ಕೆ ಧರ್ಮರಾಯ ರೀತಿ ಇದ್ದರೂ, ಒಳಗೆ ದುರ್ಯೋಧನ ರೀತಿ ವರ್ತಿಸುತ್ತಾರೆ, ಅವರಲ್ಲಿ ವಿಶ್ವಾಸ ಇಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇದನ್ನೇ ನಾನು ಉಪನ್ಯಾಸದಲ್ಲೂ ಉಲ್ಲೇಖಿಸಿದೆ ಎಂದು ಅವರು ವಿವರಿಸಿದರು.

ಇತ್ತೀಚಿಗೆ ರಾಷ್ಟ್ರೀಯ ರಾಜಕಾರಣದ ರೀತಿ, ನೀತಿ ನೋಡಿದರೆ, ಎಲ್ಲೋ ನಾವು ಪ್ರಜಾಪ್ರಭುತ್ವವನ್ನು ಪಕ್ಕಕ್ಕೆ ತಳ್ಳಿ, ಸರ್ವಾಧಿಕಾರಿ ಧೋರಣೆ ಕಡೆ ಹೋಗುತ್ತಿದ್ದೇವೆ, ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದ್ದು, ಸರ್ವಾಧಿಕಾರಿ ಆಡಳಿತದ ಆ ದಿನಗಳು ಬಂದಿದೆ ಎನಿಸುತ್ತದೆ. ಆದ್ದರಿಂದ, ಇಂತಹ ಸಂಶಯ ನಿವಾರಿಸಲು, ಮಾನವೀಯ ಮೌಲ್ಯಗಳನ್ನು ಗುರುತಿಸಲು ಪ್ರಧಾನಿ ಪ್ರಯತ್ನ ಮಾಡಿಲ್ಲ ಎನ್ನುವ ಉದ್ದೇಶದಿಂದ ಹೇಳಿದ್ದೇನೆ ಹೊರತು, ಯಾರ ಮೇಲೂ ಟೀಕೆ ಮಾಡಿಲ್ಲ ಎಂದರು.

ಅದು ಅಲ್ಲದೆ, ಆಡಳಿತ ನಡೆಸುವ ಅಧಿಕಾರಕ್ಕೆ ಸೇಡಿನ ಮನೋಭಾವ ಇರಬಾರದು. ತಮ್ಮ ವಿರುದ್ಧ ಯಾರೇ ಮಾತನಾಡಿದರೂ, ಹತ್ತಿಕ್ಕುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ನೀತಿಯೂ ಅಲ್ಲ, ಯಶಸ್ವಿ ನಾಯಕನ ನಡುವಳಿಕೆಯೂ ಅಲ್ಲ. ಇಂತಹ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ ಎಂದು ಹಂ.ಪ.ನಾಗರಾಜಯ್ಯ ತಿಳಿಸಿದರು.

‘ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ. ಈ ಮೂಲಕ ಬಿಜೆಪಿ ಸರಕಾರ ತಮ್ಮದು ‘ದುರ್ಯೋದನ' ಸರಕಾರ ಎಂದು ಸಾಬೀತುಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೋಮುಖವ್ಯಾಘ್ರ ಮುಖ ಬಯಲಾಗಿದೆ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News