ಹಂ.ಪ.ನಾಗರಾಜಯ್ಯ ವಿಚಾರಣೆ ರಾಜ್ಯಕ್ಕೆ ಮಾಡಿದ ಅಪಮಾನ: ಡಿ.ಕೆ.ಶಿವಕುಮಾರ್

Update: 2021-01-22 16:23 GMT

ಬೆಂಗಳೂರು, ಜ. 22: ‘ಬಿಜೆಪಿ ಸರಕಾರ ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸಿ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಮಂಡ್ಯದಲ್ಲಿ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದು ಕನ್ನಡ ಸಾಹಿತ್ಯ ಲೋಕ ಹಾಗೂ ರಾಜ್ಯಕ್ಕೆ ಮಾಡಿದ ಅಪಮಾನ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಂಡ್ಯದಲ್ಲಿ ಹಿರಿಯ ಸಾಹಿತಿ, ಭಾಷಾ ಸಂಶೋಧಕ ಹಂ.ಪ.ನಾಗರಾಜಯ್ಯರನ್ನು ಬಂಧಿಸಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸಾಹಿತ್ಯ ಲೋಕಕ್ಕೆ ಹೆಸರು ತಂದವರು. ಅವರು ‘ಕೇಂದ್ರ ಸರಕಾರ ಧರ್ಮರಾಯನಂತೆ ಬಂದು ದುರ್ಯೋಧನನಂತೆ ವರ್ತಿಸುತ್ತಿದೆ' ಎಂದು ಹೇಳಿದ್ದಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವುದೆಂದರೆ ಏನಿದು ? ಕನ್ನಡ ಸಾಹಿತ್ಯ ಪರಿಷತ್ ಏನು ಮಾಡುತ್ತಿದೆ? ಕನ್ನಡ ರಕ್ಷಣೆ ಹೆಸರಲ್ಲಿರುವ ಕರವೇ, ಜಯ ಕರ್ನಾಟಕ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ಏನು ಮಾಡುತ್ತಿವೆ? ಇವರು ಇರುವುದು ಏತಕ್ಕೆ? ಎಂದು ಪ್ರಶ್ನಿಸಿದರು.

ಅವರು ದೇಶದ ರೈತರ ವಿಚಾರದಲ್ಲಿ ಅವರ ಧ್ವನಿ ಎತ್ತಿದ್ದಾರೆ. ಅವರಿಗೆ ಮಾತನಾಡುವ ಹಕ್ಕಿಲ್ಲವೇ? ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ. ಇದು ಕರ್ನಾಟಕ ಸಾಹಿತ್ಯ ಲೋಕಕ್ಕೆ ಆಗಿರುವ ಅಪಮಾನ. ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಈ ಸರಕಾರದ ವಿರುದ್ಧ ಮಾತನಾಡುವವರನ್ನೆಲ್ಲ ಜೈಲಿಗೆ ಕಳುಹಿಸಲು, ಬೇರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುವುದು ಎಷ್ಟು ಸರಿ? ಇದೆಲ್ಲ ಎಷ್ಟು ದಿನ ನಡೆಯುತ್ತದೆ? ಇದು ರಾಜ್ಯದ ಸ್ವಾಭಿಮಾನದ ಪ್ರಶ್ನೆ. ನಾನು ಅವರ ಮನೆಗೆ ಹೋಗಿ ಅವರ ಮನೆಯವರನ್ನು ಸಂಪರ್ಕಿಸಿ ಮಾತನಾಡುತ್ತೇನೆ. ನಾನು ಚಿಕ್ಕ ವಯಸ್ಸಿನಿಂದ ಆ ಕುಟುಂಬ ನೋಡಿಕೊಂಡು ಬಂದಿದ್ದೇನೆ. ಅವರು ಯಾರ ಜತೆಗೂ ಗುರುತಿಸಿಕೊಂಡಿಲ್ಲ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News