ಕೇವಲ ತನಿಖೆಗೆ ಆದೇಶಿಸುವುದಲ್ಲ, ಸಿಎಂ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಬೇಕು: ಡಿ.ಕೆ.ಶಿವಕುಮಾರ್

Update: 2021-01-22 16:30 GMT

ಬೆಂಗಳೂರು, ಜ. 22: ಸ್ಫೋಟಕಗಳನ್ನು ಹೇಗೆ? ಎಲ್ಲಿ ಸಂಗ್ರಹಿಸಬೇಕು, ಅದನ್ನು ಯಾವ ರೀತಿ ಸಾಗಿಸಬೇಕು, ಹೇಗೆ ಬಳಸಬೇಕು ಎಂದು ನಿರ್ದಿಷ್ಟ ಮಾರ್ಗದರ್ಶನಗಳಿವೆ. ಆದರೆ, ಶಿವಮೊಗ್ಗದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಹೇಗೆ ಸಾಗಿಸುತ್ತಿದ್ದರು ಎಂಬುದು ಪ್ರಮುಖ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಘಟನೆ ತನಿಖೆಗೆ ಆದೇಶಿಸಿರುವುದನ್ನು ನೋಡಿದ್ದೇವೆ. ಮುಂಜಾಗೃತವಾಗಿ ಜವಾಬ್ದಾರಿಯುತ ವ್ಯವಸ್ಥೆ ನಿರ್ಮಿಸಬೇಕು. ಈ ದುರ್ಘಟನೆಯಲ್ಲಿ ಅನೇಕರು ಮೃತಪಟ್ಟಿರುವುದು ಆಘಾತಕಾರಿ ಬೆಳವಣಿಗೆ. ಎರಡು ಜಿಲ್ಲೆಗಳ ಜನರಿಗೆ ಗಾಬರಿ ಉಂಟು ಮಾಡಿದ್ದಕ್ಕೆ ಯಾರು ಹೊಣೆ? ಇದರ ಜವಾಬ್ದಾರಿ ಯಾರು ಹೊತ್ತುಕೊಳ್ಳುತ್ತಾರೆ? ಎಂಬುದನ್ನು ನಾವು ಯೋಚಿಸಬೇಕು. ಕೇವಲ ತನಿಖೆಗೆ ಆದೇಶಿಸುವುದಲ್ಲ. ಸ್ವತಃ ಸಿಎಂ, ಗಣಿ ಸಚಿವರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಬೇಕು. ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

ವಲಸಿಗರ ಸಮಾಧಿ: ವಲಸೆ ಹೋದವರನ್ನು ರಾಜಕೀಯ ಸಮಾಧಿ ಮಾಡುತ್ತಾರೆಂದು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ನಾರಾಯಣಗೌಡ, ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ, ಆರ್.ರೋಷನ್ ಬೇಗ್, ಮುನಿರತ್ನ ಪರಿಸ್ಥಿತಿ ನೋಡುತ್ತಿದ್ದೇವೆ. ಇದು ಅವರ ಆಂತರಿಕ ಸಮಸ್ಯೆ. ಅವರು ಬಹಳ ಪ್ರೀತಿಯಿಂದ ಹೋಗಿದ್ದಾರೆ. ಅವರಿಗೆ ಈಗಲಾದರೂ ಅರ್ಥವಾಗುತ್ತಿದೆಯಲ್ಲ ಅಷ್ಟು ಸಾಕು. ಇನ್ನು ಪಕ್ಷದ ಸಂಘಟನೆ ಹಾಗೂ ಜವಾಬ್ದಾರಿ ಹಂಚಿಕೆಗಾಗಿ ಪಕ್ಷದ ರಾಷ್ಟ್ರ ನಾಯಕರು ಈ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಸರಕಾರದ ವಿರುದ್ಧ ಧ್ವನಿ: ರಾಜಭವನ ಚಲೋ ಡಿ.ಕೆ.ಶಿವಕುಮಾರ್ ಕಾರ್ಯಕ್ರಮವಲ್ಲ. ಇದು ಜನರು, ರೈತರ ಧ್ವನಿ. ಹೀಗಾಗಿ ಸಾಮಾನ್ಯ ಜನರ ಬದುಕು ಕೆಣಕುತ್ತಿರುವ ಸರಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಸಾವಿರಾರು ಜನ ಸೇರಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇದು ಪಕ್ಷದ ಸಂಘಟನೆಯೂ ಹೌದು. ನಾನು ಈಗಾಗಲೇ ಹೇಳಿರುವ ಪ್ರಕಾರ ಇದು ಸಂಘಟನೆ ವರ್ಷ, ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News