ಕಮಲಾ ಉಪಾಧ್ಯಕ್ಷೆಯಾದ ಬಳಿಕ, ಭಾರತ-ಅಮೆರಿಕ ಸಂಬಂಧ ಇನ್ನಷ್ಟು ಗಟ್ಟಿ

Update: 2021-01-22 17:09 GMT

ವಾಶಿಂಗ್ಟನ್, ಜ. 22: ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾದ ಬಳಿಕ, ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಬೆಸೆದುಕೊಂಡಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಗುರುವಾರ ಹೇಳಿದ್ದಾರೆ.

ಜಮೈಕಾದ ತಂದೆ ಮತ್ತು ಭಾರತದ ತಾಯಿಗೆ ಹುಟ್ಟಿರುವ 56 ವರ್ಷದ ಕಮಲಾ, ಅಮೆರಿಕದ ಮೊದಲ ಮಹಿಳಾ, ಮೊದಲ ಕಪ್ಪು ಮತ್ತು ಮೊದಲು ಏಶ್ಯನ್ ಅವೆುರಿಕನ್ ಉಪಾಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸುವುದರೊಂದಿಗೆ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ.

ಉಭಯ ದೇಶಗಳ ನಡುವಿನ ಯಶಸ್ವಿ ಸುದೀರ್ಘ ಬಾಂಧವ್ಯವನ್ನು ಅಧ್ಯಕ್ಷ ಜೋ ಬೈಡನ್ ಗೌರವಿಸುತ್ತಾರೆ ಎಂದು ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆನ್ ಸಾಕಿ ಹೇಳಿದರು.

‘‘ಅಧ್ಯಕ್ಷ ಬೈಡನ್ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಭಾರತ ಮತ್ತು ಅವೆುರಿಕಗಳ ನಾಯಕರ ನಡುವಿನ ಸುದೀರ್ಘ ಯಶಸ್ವಿ ಬಾಂಧವ್ಯವನ್ನು ಅವರು ಗೌರವಿಸುತ್ತಾರೆ. ಈ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಶ್ವೇತಭವನ ಸಿದ್ಧವಾಗಿದೆ’’ ಎಂದು ಅವರು ಹೇಳಿದರು.

ನೂತನ ಬೈಡನ್ ಸರಕಾರದ ಅಡಿಯಲ್ಲಿ ಭಾರತ-ಅವೆುರಿಕ ಸಂಬಂಧ ಹೇಗಿರುತ್ತದೆ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘‘ಅಧ್ಯಕ್ಷ ಜೋ ಬೈಡನ್ ತನ್ನ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ರನ್ನು ಆಯ್ಕೆ ಮಾಡಿದರು ಹಾಗೂ ನಿನ್ನೆ ಅವರು ಮೊದಲ ಭಾರತೀಯ-ಅವೆುರಿಕನ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅದು ಈ ದೇಶದಲ್ಲಿರುವ ನಮಗೆಲ್ಲ ಒಂದು ಐತಿಹಾಸಿಕ ಕ್ಷಣವಾಯಿತು ಹಾಗೂ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬೆಸೆಯಿತು’’ ಎಂದು ಸಾಕಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News