ಕೃಷಿ ಕಾಯ್ದೆ ವಿರೋಧಿಸಿ ಜ.26ರಂದು ಬೆಂಗಳೂರಿನಲ್ಲಿ ರೈತರ ಪೆರೇಡ್: ಬಡಗಲಪುರ ನಾಗೇಂದ್ರ

Update: 2021-01-22 18:06 GMT

ಮೈಸೂರು,ಜ.22: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಜ.26 ರ ಗಣರಾಜ್ಯೋತ್ಸವದಂದು ನಡೆಯಲಿರುವ ಟ್ರ್ಯಾಕ್ಟರ್ ರ್‍ಯಾಲಿಯನ್ನು ಬೆಂಬಲಿಸಿ ಅಂದೇ ಬೆಂಗಳೂರಿನಲ್ಲೂ ರೈತರ ಪೆರೇಡ್ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ ಮಸೂದೆಗಳ ವಿರುದ್ಧ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ರೈತರು ಬೆಂಗಳೂರಿನಲ್ಲಿ ಪೆರೇಡ್ ನಡೆಸಲಿದ್ದು, ರೈತ ಪೆರೇಡ್‍ಗೆ ತೆರಳಲು ಜ.22 ರಂದು ವಾಹನ ಜಾಥಾ ನಡೆಯಲಿದ್ದು, ಅಂದು ಕೊಡಗು ಜಿಲ್ಲೆಯ ಕುಟ್ಟದಿಂದ ಜಾಥ ಹೊರಡಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆಯುವ ರೈತ ಪೆರೇಡ್‍ಗೆ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 5 ಸಾವಿರ ವಾಹನಗಳಲ್ಲಿ ಆಗಮಿಸಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ನುಡಿದರು.

ರೈತ ಪೆರೇಡ್‍ಗೆ ಪೂರ್ವಭಾವಿಯಾಗಿ ಜ.25ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ಈ ವೇಳೆ ಸಾರ್ವಜನಿಕರಿಗೆ ಕೇಂದ್ರ-ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ರೈತ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದ ಅವರು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಜಾಗೃತಿ ಅಭಿಯಾನ ನಡೆಯಲಿದ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ  ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿ.ಸಿ.ಪಾಟೀಲ್‍ಗೆ ಸಾಮಾನ್ಯ ಜ್ಞಾನವೇ ಇಲ್ಲ
ಕೃಷಿ ಸಚಿವ ಬಿ.ಸಿ.ಪಾಟೀಲ್ ತರಬೇತಿ ಪಡೆದು ನಂತರ ಆಡಳಿತ ನಡೆಸಲಿ. ಬೇಕಾದರೆ ಕೃಷಿ ಬಗ್ಗೆ ನಾವೇ 15 ದಿನ ತರಬೇತಿ ನೀಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.

ಬಿ.ಸಿ.ಪಾಟೀಲ್‍ ಅವರು ಬಾಯಿಗೆ ಬಂದ ಹಾಗೆ ಮಾತನಾಡಿ ಜನರಿಂದ ಥೂ ಛೀ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಅವರ ಇಲಾಖೆಯಲ್ಲಿ ಆಡಳಿತ ನಡೆಸುವ ಮುನ್ನ ಕೃಷಿ ಬಗ್ಗೆ ಅಧ್ಯಯನ ಮಾಡಬೇಕಿದೆ. ಅದಕ್ಕಾಗಿ ಅವರಿಗೆ ತರಬೇತಿ ಅಗತ್ಯವಿದ್ದು, ನಾವೇ ರೈತ ಸಂಘದ ವತಿಯಿಂದ ತರಬೇತಿ ನೀಡುತ್ತೇವೆ ಎಂದು ಹೇಳಿದರು.

ಕೃಷಿ ಇಲಾಖೆ ಎಂದರೆ ದೊಡ್ಡ ಇಲಾಖೆ, ಇದನ್ನು ನಿಭಾಯಿಸಲು ಕೃಷಿ ಬಗ್ಗೆ ಜ್ಞಾನ ಇರಬೇಕು. ಸುಮ್ಮನೆ ಯಾರ್ಯಾರೊ ಈ ಇಲಾಖೆ ನಿಭಾಯಿಸಲು ಸಾಧ್ಯವಿಲ್ಲ. ಸಾಮಾನ್ಯ ಜ್ಞಾನವಾದರೂ ಇರಬೇಕು. ಆದರೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಅದ್ಯಾವುದೂ ಇಲ್ಲ. ಹಾಗಾಗಿಯೇ ಚಳಿಗಾಲದಲ್ಲಿ ರಾಗಿ ಬಿತ್ತನೆ ನಾಟಿ ಮಾಡುತ್ತಾರೆ ಎಂದು ಹೇಳುತ್ತಾರೆ. ಯಾರಾದರೂ ಚಳಿಗಾಲದಲ್ಲಿ ರಾಗಿ ಬಿತ್ತನೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಇವರು ಇದೇ ರೀತಿ ಮಾತನಾಡಿದರೆ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಜನರೇ ಇವರ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News