ಅಕ್ರಮ ದಾಸ್ತಾನು ಸ್ಫೋಟಕ ದುರಂತಕ್ಕೆ ಸಚಿವ ಈಶ್ವರಪ್ಪ ಹೊಣೆ: ಎಫ್ಐಟಿಯು

Update: 2021-01-22 18:13 GMT

ಬೆಂಗಳೂರು, ಜ.22: ಅಕ್ರಮ ಕಲ್ಲು ಗಣಿಗಾರಿಕೆಯನ್ನು ಹೊಂದಿರುವ ಶಿವಮೊಗ್ಗದಲ್ಲಿನ ಅಬ್ಬಳಕೆರೆ ಎಂಬ ಪ್ರದೇಶದಲ್ಲಿ ಬೇಜವಾಬ್ದಾರಿಯುತವಾಗಿ, ಸಂಗ್ರಹಿಸಿಟ್ಟ ಸ್ಫೋಟಕ ವಸ್ತುಗಳು ಸಿಡಿದ ಕಾರಣ ಹತ್ತಕ್ಕಿಂತ ಹೆಚ್ಚು ಬಡಕಾರ್ಮಿಕರು ಮೃತಪಟ್ಟಿರುವ ದುರಂತದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿರುವ ಎಫ್ಐಟಿಯು ರಾಜ್ಯಾದ್ಯಕ್ಷ ಸುಲೈಮಾನ್ ಕಲ್ಲರ್ಪೆ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳದೆ ಇಷ್ಟೊಂದು ಸ್ಫೋಟಕ ವಸ್ತುಗಳನ್ನು ಸಂಗ್ರಹಿಡಲು ಅನುಮತಿ ನೀಡಿದ ಸರಕಾರಿ ಅಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ಶಾಸಕರೂ, ಸಚಿವರೂ ಆಗಿರುವ ಈಶ್ವರಪ್ಪನವರು ನೇರ ಹೊಣೆಯಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಈಶ್ವರಪ್ಪ ಕೇವಲ ಸಂತಾಪ ಸೂಚಿಸಿ ಪಲಾಯನ ಮಾಡಲಾಗದು, ಇವರಿಗೆ ಕಾರ್ಮಿಕರ ಬಗ್ಗೆ ನೈಜ ಕಾಳಜಿ ಮತ್ತು ರಾಜಕೀಯ ನೈತಿಕತೆ ಇದ್ದಲ್ಲಿ ಸಾವಿಗೀಡಾಗಿರುವ ಕಾರ್ಮಿಕರ ಕುಟುಂಬಕ್ಕೆ ಜುಜುಬಿ ಪರಿಹಾರ ನೀಡಿ ಕಣ್ಣೊರೆಸುವ ಪ್ರಹಸನ ಮಾಡದೆ ಸರಿಯಾದ ಪರಿಹಾರ ಒದಗಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸುಲೈಮಾನ್ ಕಲ್ಲರ್ಪೆ ಆಗ್ರಹಿಸಿದ್ದಾರೆ.

ಕಾರ್ಮಿಕರು ದೇಶದ ಅಭಿವೃದ್ಧಿಯ ಯೋಧರಾಗಿದ್ದಾರೆ. ಇಂತಹ ಮುಗ್ಧ ಕಾರ್ಮಿಕರನ್ನು ಅಕ್ರಮ ಕೆಲಸಗಳಲ್ಲಿ ತೊಡಗಿಸಿಕೊಳ್ಳವುದು ಮಹಾ ಅಪರಾಧವಾಗಿದೆ. ಆದುದರಿಂದ, ಕೇವಲ ಗಣಿ ಕೋರೆಯ ಮಾಲಕರನ್ನು ಮಾತ್ರ ವಿಚಾರಣೆ ನಡೆಸಿ ಹರಕೆ ತೀರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ಆ ಪ್ರದೇಶಕ್ಕೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News