ಖಾತೆ ಬದಲಾವಣೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಸಚಿವ ಡಾ.ಕೆ.ಸುಧಾಕರ್

Update: 2021-01-22 18:14 GMT

ಬೆಂಗಳೂರು, ಜ. 22: ಕೋವಿಡ್ ನಿಯಂತ್ರಣ ಲಸಿಕೆ ಅಭಿಯಾನದ ಸಂದರ್ಭದಲ್ಲಿ ಸಚಿವರ ಖಾತೆ ಬದಲಾವಣೆಯಿಂದ ಸಮನ್ವಯದ ಕೊರತೆ ಉಂಟಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾತೆ ಬೇರೆ ಬೇರೆಯಾದರೆ ಸಮಸ್ಯೆ ಸೃಷ್ಟಿಯಾಗಲಿದೆ. ಕೋವಿಡ್-19 ಸೋಂಕಿಗೆ ಲಸಿಕೆ ನೀಡುತ್ತಿರುವ ಈ ಸಂದರ್ಭದಲ್ಲಿ ಮಂತ್ರಿಗಳ ಖಾತೆ ಬದಲಾವಣೆ ಸರಿಯಲ್ಲ ಎಂದು ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಖಾತೆ ಬದಲಾವಣೆ ಸಂಬಂಧ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನನಗೆ ಪಕ್ಷದ ಶಿಸ್ತು ಅತ್ಯಂತ ಮುಖ್ಯವಾಗಿದೆ. ಇಲ್ಲಿ ವೈಯಕ್ತಿಕ ಆಸೆ-ಆಕಾಂಕ್ಷೆ ಮುಖ್ಯವಲ್ಲ, ನಾನು ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇಕಡ ಮೂರು ಮತ ಪಡೆದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಿದ್ದೇವೆ. ನಾವು ‘ರಾಜಕೀಯ ಆತ್ಮಹತ್ಯೆ' ಪರಿಸ್ಥಿತಿಯಲ್ಲಿ ಆಯ್ಕೆಯಾಗಿ ಬಂದಿದ್ದೇವೆ. ಅದರಲ್ಲೂ ಎಂಟಿಬಿ ನಾಗರಾಜ್ ತಮ್ಮ ಬಳಿ ಇದ್ದ ವಸತಿ ಖಾತೆ ತ್ಯಜಿಸಿ ಬಂದವರು. ಖಾತೆ ಹಂಚಿಕೆಯಲ್ಲಿ ಅವರಿಗೆ ಅನ್ಯಾಯ ಆಗಿದೆ ಎಂದು ತಿಳಿಸಿದರು.

ಒಬ್ಬರಿಗೆ ಕೊಡಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಂದಕ್ಕೊಂದು ಸಂಬಂಧ ಇರುವುದರಿಂದ ಯಾರಿಗೆ ಬೇಕಾದರೂ ಖಾತೆ ಕೊಡಲಿ. ಎರಡೂ ಖಾತೆಗಳನ್ನು ಒಬ್ಬರಿಗೇ ಕೊಡಲಿ ಎಂಬುದು ನನ್ನ ಮನವಿ ಎಂದು ಸುಧಾಕರ್ ತಿಳಿಸಿದರು.

ಅಗತ್ಯಕ್ಕಿಂತ ಹೆಚ್ಚು ಬಳಕೆ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜಿಲೆಟಿನ್ ಕಡ್ಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡಲಾಗುತ್ತಿದ್ದು, ಹೆಚ್ಚು ಶೇಖರಣೆ ಮಾಡಲಾಗುತ್ತಿದೆ. ಕಾನೂನು ಗಾಳಿಗೆ ತೋರಿ ಜಲ್ಲಿ ಕ್ರಷರ್ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ನನ್ನ ಜಿಲ್ಲೆಯಲ್ಲಿಯೂ ಕ್ರಷರ್ ಕೆಲಸಗಳು ನಡೆಯುತ್ತಿದ್ದು, ಅನುಮತಿ ನೀಡುವ ವೇಳೆ ಪರಿಶೀಲನೆ ನಡೆಸಬೇಕು ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News