ಸಾಹಿತಿ ಹಂ.ಪ.ನಾಗರಾಜಯ್ಯ ಪೊಲೀಸ್ ವಿಚಾರಣೆಗೆ ತೀವ್ರ ಆಕ್ರೋಶ

Update: 2021-01-22 18:27 GMT

ಮಂಡ್ಯ, ಜ.22: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಟೀಕಿಸಿದ ಹಿನ್ನೆಲೆಯಲ್ಲಿ ಹಿರಿಯ ಸಂಶೋಧಕ, ಸಾಹಿತಿ ಡಾ.ಹಂ.ಪ.ನಾಗರಾಜಯ್ಯ(ಹಂಪನಾ) ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಈಚೆಗೆ ನಡೆದ ಮಂಡ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವಾಗ ದೆಹಲಿಯಲ್ಲಿ ರೈತರ ಪ್ರತಿಭಟನೆಗೆ 50 ದಿನವಾದರೂ ಪ್ರಧಾನಿ ಮೋದಿ ರೈತ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿರುವ ಸಂಬಂಧ ಹಂಪನಾ ಟೀಕಿಸಿದ್ದರು. ಜತೆಗೆ, ಧರ್ಮರಾಯನಂತಿದ್ದ ಮೋದಿ ದುರ್ಯೋಧನನಾಗಿ ಬದಲಾಗಿದ್ದಾರೆಂದು ವ್ಯಂಗ್ಯವಾಡಿದ್ದರು.

''ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡವಳಿಕೆಯನ್ನು ಒಬ್ಬ ಸಾಹಿತಿಯಾಗಿ ದುರ್ಯೋಧನ ಎಂದು ವ್ಯಾಖ್ಯಾನ ಮಾಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ನೀಡಿರುವ ದೂರಿನ ಆಧಾರದ ಮೇಲೆ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಆಘಾತಕಾರಿ ಮಾತ್ರವಲ್ಲ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಖಂಡಿಸಿದ್ದಾರೆ.

ಯಾವ ಕಾಲಘಟ್ಟದಲ್ಲೂ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಯಾವುದೇ ಸರಕಾರವು ಮಾಡಿರಲಿಲ್ಲ. ಆದರೆ, ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಮಾಜದ ಎಲ್ಲಾ ವರ್ಗಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್ ತೀರ್ಪನ್ನು  ವಿಮರ್ಶೆಗೆ ಒಳಪಡಿಸಬಹುದು ಎಂಬ ತೀರ್ಪು ಬಂದಿರುವ ಈ ಕಾಲಘಟ್ಟದಲ್ಲಿ ಪ್ರಜೆಗಳಿಂದ ಆಯ್ಕೆಯಾಗಿರುವ ಸರಕಾರ ಮತ್ತು ಸರಕಾರದ ಮುಖ್ಯಸ್ಥರನ್ನು ವಿಮರ್ಶೆ ಮಾಡುವುದು ಅಪರಾಧ ಎಂದು ಭಾವಿಸುವುದೇ ಮೂರ್ಖತನದ ಪರಮಾವಧಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. ಒಬ್ಬ ಪ್ರಜೆಯಾಗಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಲೇಖಕ, ಸಾಹಿತಿಯಾಗಿ ಕೇಂದ್ರ ಸರಕಾರ ಮತ್ತು ಮೋದಿಯವರನ್ನು ವಿಮರ್ಶೆ ಮಾಡುವ ಅಥವಾ ಟೀಕಿಸುವ ಹಕ್ಕು ಖಂಡಿತ ಹಂ.ಪ.ನಾಗರಾಜಯ್ಯ ಅವರಿಗೆ ಇದೆ. ಪೊಲೀಸ್ ಇಲಾಖೆ ಇಂಥ ವಿಚಾರಗಳ ಬಗ್ಗೆ ಸೂಕ್ಷ್ಮತೆಯಿಂದ ನಡೆದುಕೊಳ್ಳುವುದು ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ರಮವಹಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಇದು ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ತಮ್ಮ ಸರಕಾರದ ವಿರುದ್ಧ ಮಾತನಾಡುವವರೆಲ್ಲರಿಗೂ ದೇಶದ್ರೋಹಿಗಳ ಪಟ್ಟಕಟ್ಟಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದೆ. ಆ ಮೂಲಕ ಜನರು ಅಭಿಪ್ರಾಯ ವ್ಯಕ್ತಪಡಿಸದ ರೀತಿ ಬಾಯಿಗೆ ಮುಖವಾಡ ತೊಡಿಸಲು ಹೊರಟಿದ್ದಾರೆ ಎಂದು ರೈತಸಂಘದ ಮುಖಂಡ ಶಂಭೂನಹಳ್ಳಿ ಕಿಡಿಕಾರಿದರು.

ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಪ್ರತಿಕ್ರಿಯಿಸಿ, ಸಾಹಿತಿಗಳು ವ್ಯವಸ್ಥೆಯ ದೋಷದ ವಿರುದ್ಧ ಧ್ವನಿ ಎತ್ತುತ್ತಿರುವುದೇ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಹಂಪನಾರಂತಹ ಸೌಮ್ಯವಾದಿಗಳೂ ಉಗ್ರ ಧ್ವನಿಗೆ ಮೊರೆ ಹೋಗಿರುವುದು ಸ್ವಾಗತಾರ್ಹ. ಅವರನ್ನು ಪೊಲೀಸರು ವಿಚಾರಣೆಗೆ ಕರೆಸಿರುವುದು ಖಂಡನಾರ್ಹ ಎಂದಿದ್ದಾರೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಮೂಲಭೂತ ಹಕ್ಕುಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರಿದ್ದೇವೆ. ಬೇಕಾದರೆ ಸ್ವೀಕರಿಸಬಹುದು, ಇಲ್ಲವೇ ತಿರಸ್ಕರಿಸಬಹುದು. ಆದರೆ, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲು ಅವರ್ಯಾರು. ಪೊಲೀಸರ ನಡೆ ಅತ್ಯಂತ ಖಂಡನೀಯ. ಬಿಜೆಪಿ ಸರಕಾರದ ಇಂತಹ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News