ರೈತರನ್ನು ತಲುಪದ ಕಿಸಾನ್ ಯೋಜನೆ

Update: 2021-01-23 05:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರೈತರು ಸರಕಾರದ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ರೈತರಿಂದಲೇ ದೇಶ ಎನ್ನುವ ಆದರ್ಶ ಅಪ್ರಸ್ತುತವಾಗಿದೆ ಮಾತ್ರವಲ್ಲ, ರೈತರ ಜೊತೆಗೆ ಸರಕಾರ ಜಂಗಿ ಕುಸ್ತಿಗೆ ನಿಂತಿದೆ. ಅವರನ್ನು ದೇಶದ ಶತ್ರುಗಳಂತೆ ಸರಕಾರ ಭಾವಿಸತೊಡಗಿದೆ. 11ನೆಯ ಮಾತುಕತೆ ಮುರಿದು ಬೀಳುವ ಮೂಲಕ, ‘ನೀವು ಏನೇ ಮಾಡಿ, ನಾವು ಕಾನೂನನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಪ್ರತಿ ಸವಾಲು ಹಾಕಿದೆ. ಈ ಕಾರಣದಿಂದ ಜನವರಿ 26ರ ಪ್ರತಿಭಟನೆ ಸಂಘರ್ಷ ರೂಪ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಕೊರೋನ ಮತ್ತು ಲಾಕ್‌ಡೌನ್‌ನಿಂದ ರೈತರೂ ಭಾರೀ ಪ್ರಮಾಣದಲ್ಲಿ ಹಾನಿ ಅನುಭವಿಸಿದ್ದಾರೆ. ಆ ಹಾನಿಯನ್ನು ಸರಿಪಡಿಸುವುದಕ್ಕೆ ವ್ಯಯಿಸಬೇಕಾದ ಸಮಯವನ್ನು, ಸರಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಲು ಕಳೆಯಬೇಕಾದ ಸ್ಥಿತಿಯಲ್ಲಿ ಅವರಿದ್ದಾರೆ. ಇದೇ ಸಂದರ್ಭದಲ್ಲಿ ರೈತರಿಗಾಗಿ ಸರಕಾರ ಈ ಹಿಂದೆ ಹಮ್ಮಿಕೊಂಡ ಯೋಜನೆಗಳೂ ಹೇಗೆ ಒಂದೊಂದಾಗಿ ಹಳ್ಳ ಹಿಡಿದಿವೆ ಎನ್ನುವುದರ ವಿವರಗಳು ಮಾಹಿತಿ ಹಕ್ಕುಗಳ ಮೂಲಕ ಹೊರ ಬೀಳುತ್ತಿವೆ. ಲಾಕ್‌ಡೌನ್ ಜಾರಿಗೂ ಮುನ್ನ ಕೇಂದ್ರ ಸರಕಾರ ಘೋಷಿಸಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಬಡ ರೈತರನ್ನು ಗುರಿಯಾಗಿಸಿಕೊಂಡಿತ್ತು. ಈ ಯೋಜನೆಯ ಹೆಸರಲ್ಲಿ ಸಾಕಷ್ಟು ಜಾಹೀರಾತುಗಳು ಕಂಗೊಳಿಸಿದ್ದವು. ಇದರ ಹೆಸರಲ್ಲಿ ಪ್ರಧಾನಿಯವರು ಸಾಕಷ್ಟು ಪ್ರಚಾರವನ್ನೂ ಪಡೆದಿದ್ದರು. ಪ್ಯಾಕೇಜ್‌ನ ಭಾಗವಾಗಿ ಪಿಎಂ ಕಿಸಾನ್ ಯೋಜನೆಯ ಕಂತುಗಳನ್ನು ಸರಕಾರ ರೈತರ ಖಾತೆಗಳಿಗೆ ವರ್ಗಾಯಿಸುತ್ತದೆ. ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರ ಕುಟುಂಬಕ್ಕೆ ವಾರ್ಷಿಕ 6,000 ರೂ. ಮೊತ್ತವನ್ನು ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ, ಪ್ರತೀ ನಾಲ್ಕು ತಿಂಗಳಿಗೊಮ್ಮೆ ಪಾವತಿಸಬೇಕಾಗುತ್ತದೆ. ಆದರೆ, ರೈತರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದ ಲಾಕ್‌ಡೌನ್ ಅವಧಿಯಲ್ಲಿ (2020ರ ಮಾರ್ಚ್ 23ರಿಂದ ಜುಲೈ 31ರವರೆಗೆ) ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರಕಾರ ನೀಡುವ ಆರ್ಥಿಕ ನೆರವು ಸುಮಾರು ಶೇ.44ರಷ್ಟು ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಸರಕಾರ ಉತ್ತರಿಸಿದೆ. ಈ ಅವಧಿಯಲ್ಲಿ ನಡೆಸಲಾದ 11.2 ಲಕ್ಷಕ್ಕೂ ಹೆಚ್ಚಿನ ವಹಿವಾಟು ರೈತರ ಬ್ಯಾಂಕ್ ಖಾತೆಗೆ ತಲುಪಲು ವಿಫಲವಾಗಿದೆ. 2020ರ ಡಿಸೆಂಬರ್‌ವರೆಗೆ ನಡೆಸಲಾದ ಹಣ ವರ್ಗಾವಣೆಯಲ್ಲಿ ಶೇ.44ರಷ್ಟು ವಿಫಲವಾಗಿದ್ದು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಕಳುಹಿಸಿದ ಉತ್ತರದಲ್ಲಿ ತಿಳಿಸಿದೆ. ಒಟ್ಟು 11.29 ಲಕ್ಷ ವಿಫಲ ವಹಿವಾಟಿ(ಫೇಯ್ಲಾಡ್ ಟ್ರಾನ್ಸಾಕ್ಷನ್) ನಲ್ಲಿ 22.58 ಲಕ್ಷ ರೂ. ಮೊತ್ತ ಒಳಗೊಂಡಿರುತ್ತದೆ. ವಿಫಲ ವಹಿವಾಟಿನ ಪ್ರಕರಣದಲ್ಲಿ ಎಷ್ಟು ಮಂದಿ ಫಲಾನುಭವಿಗಳು ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದು ಉತ್ತರದಲ್ಲಿ ಸ್ಪಷ್ಟವಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ವಹಿವಾಟಿನಲ್ಲಿ ವಿಫಲ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಕೋರಿ ‘ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್’ನ ವೆಂಕಟೇಶ್ ನಾಯಕ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಉತ್ತರಿಸಿದ್ದ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಒಟ್ಟು 11,29,401 ವಿಫಲ ವಹಿವಾಟು ಇದ್ದು ಇದರಲ್ಲಿ 11,28,389 ವಹಿವಾಟು 27 ರಾಜ್ಯಗಳಿಗೆ ಸಂಬಂಧಿಸಿದ್ದು ಮತ್ತು 7,012 ವಹಿವಾಟು 8 ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಅತ್ಯಧಿಕ ವಿಫಲ ವಹಿವಾಟು ದಾಖಲಾದ ರಾಜ್ಯಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ (7.29 ಲಕ್ಷ ಅಥವಾ ಒಟ್ಟು ವಹಿವಾಟಿನ ಶೇ.64.55), ಮಹಾರಾಷ್ಟ್ರ (85,000 ಅಥವಾ ಒಟ್ಟು ವಹಿವಾಟಿನ ಶೇ.7.54) ದ್ವಿತೀಯ ಸ್ಥಾನದಲ್ಲಿದೆ. ಕರ್ನಾಟಕ(55,000ಕ್ಕೂ ಅಧಿಕ), ಬಿಹಾರ(51,000ಕ್ಕೂ ಅಧಿಕ), ಉತ್ತರಪ್ರದೇಶ (ಸುಮಾರು 48,000) ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಒಟ್ಟು ವಿಫಲ ವಹಿವಾಟಿನಲ್ಲಿ ಶೇ.86 ಈ ಐದು ರಾಜ್ಯಗಳಲ್ಲಿಯೇ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜಮ್ಮು-ಕಾಶ್ಮೀರದಲ್ಲಿ 6,794 ವಿಫಲ ವಹಿವಾಟು ನಡೆದಿದ್ದರೆ ಲಡಾಖ್ ಬಳಿಕದ ಸ್ಥಾನದಲ್ಲಿದೆ. 9 ಕೋಟಿಗೂ ಅಧಿಕ ರೈತರ ಕುಟುಂಬಗಳಿಗೆ ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಕಂತು ಪಾವತಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಪಿಎಂ ಕಿಸಾನ್ ವೆಬ್‌ಸೈಟ್ 11.50 ಕೋಟಿ ರೈತರಿಗೆ ಕಂತು ಪಾವತಿಯಾಗಿದೆ ಎಂದು ಮಾಹಿತಿ ನೀಡಿದೆ. ಈ ವ್ಯತ್ಯಾಸದ ಬಗ್ಗೆ ಕೇಂದ್ರ ಸರಕಾರ ವಿವರಣೆ ನೀಡಬೇಕು. ಜೊತೆಗೆ, ಯೋಜನೆ ಜಾರಿಯಲ್ಲಿ ಹೆಚ್ಚಿನ ಪಾರದರ್ಶಕತೆ ಖಾತರಿಪಡಿಸಲು ವಿಫಲ ವಹಿವಾಟಿನ ಪ್ರಕರಣ, ಮರು ವಹಿವಾಟಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಬೇಕಾಗಿದೆ.

  ಸದ್ಯದ ಸ್ಥಿತಿಯಲ್ಲಿ ಸರಕಾರ ಬಡವರಿಗಾಗಿ ಘೋಷಿಸಿದ ಯೋಜನೆಗಳೆಲ್ಲ ನನೆಗುದಿಯಲ್ಲಿವೆ. ಸರಕಾರದ ಬಳಿ ಇಂದು ಸ್ಮಾರಕಗಳಿಗೆ, ಸ್ಮಾರ್ಟ್ ಸಿಟಿಗಳಿಗೆ ವ್ಯಯಿಸುವುದಕ್ಕೆ, ವೆಚ್ಚ ಮಾಡುವುದಕ್ಕೆ ದುಡ್ಡಿದೆ. ಆದರೆ ರೈತರಿಗಾಗಿ, ಕಾರ್ಮಿಕರಿಗಾಗಿ ಘೋಷಿಸಿದ ಯೋಜನೆಗಳಿಗೆ ಪಾವತಿಸಲು ದುಡ್ಡಿನ ಕೊರತೆ ಎದುರಾಗಿದೆ ಅಥವಾ ಅವರಿಗೆ ನೆರವಾಗುವುದು ನಷ್ಟದ ಬಾಬ್ತು ಎಂದು ಸರಕಾರ ಭಾವಿಸಿಕೊಂಡಂತಿದೆ. ಇದೇ ರೀತಿ, ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ತಲುಪಬೇಕಾದ ಅನುದಾನಗಳು ತಲುಪುತ್ತಿಲ್ಲ. ಅಲ್ಪಸಂಖ್ಯಾತರು ಮತ್ತು ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಿಗಬೇಕಾದ ಅನುದಾನಗಳು ಲಾಕ್‌ಡೌನ್‌ನ ಅವಧಿಯಲ್ಲಿ ತಲುಪಲೇ ಇಲ್ಲ. ಮೊದಲೇ ಲಾಕ್‌ಡೌನ್‌ನಿಂದ ತತ್ತರಿಸಿರುವ ದುರ್ಬಲ ವರ್ಗದ ಜನರು, ಸ್ಕಾಲರ್ ಶಿಪ್‌ಗಳು, ಇತರ ಸೌಲಭ್ಯಗಳು ಸ್ಥಗಿತವಾಗಿರುವುದರಿಂದ ಕಂಗಾಲಾಗಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಕಡೆಗೆ ಗಮನ ಹರಿಸುವ ಬದಲು, ಲವ್‌ಜಿಹಾದ್ ಕಾನೂನು, ರಾಮಮಂದಿರ, ಗೋಹತ್ಯೆ ನಿಷೇಧ ಇತ್ಯಾದಿಗಳಿಂದಲೇ ಅಧಿಕಾರ ಹಿಡಿಯಬಹುದು ಎನ್ನುವುದು ಸರಕಾರಕ್ಕೆ ಮನವರಿಕೆಯಾದಂತಿದೆ. ಆದುದರಿಂದಲೇ ಅದು ರೈತರು, ದಲಿತರು, ಕಾರ್ಮಿಕರ ಕುರಿತಂತೆ ಅತ್ಯಂತ ಉದಾಸೀನತೆಯನ್ನು ಪ್ರದರ್ಶಿಸುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ, ಎಲ್ಲ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡು ಶಿಕ್ಷಣ, ಕೃಷಿ, ಆರೋಗ್ಯ ಇತ್ಯಾದಿಗಳಿಗಾಗಿ ನೆರವು ನೀಡುವುದು ಸರಕಾರದ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಜನರು ರಾಮಮಂದಿರ, ಗೋವು, ಲವ್ ಜಿಹಾದ್ ಎಂಬಿತ್ಯಾದಿ ಗಳ ವಿಸ್ಮತಿಯಿಂದ ಹೊರಬಂದು, ಬದುಕಿನ ಮೂಲಭೂತ ಅಗತ್ಯಕ್ಕಾಗಿ ಸರಕಾರದ ಜೊತೆಗೆ ಹೋರಾಡುವ ಸಮಯ ಬಂದಿದೆ. ಜನವರಿ 26ರ ಗಣರಾಜ್ಯೋತ್ಸವದ ದಿನದ ಹೋರಾಟ ಈ ನಿಟ್ಟಿನಲ್ಲಿ ಜನರ ಬದುಕುವ ಹಕ್ಕಿನ ಹೋರಾಟವಾಗಿ ಬದಲಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News