ಬಿಜೆಪಿ-ಟಿಎಂಸಿ ಬೆಂಬಲಿಗರ ಘರ್ಷಣೆ: ವಾಹನಗಳಿಗೆ ಬೆಂಕಿ, ಹಲವರಿಗೆ ಗಾಯ

Update: 2021-01-23 17:10 GMT

ಕೋಲ್ಕತಾ, ಜ.23: ಪಶ್ಚಿಮ ಬಂಗಾಳದ ಹೌರಾದಲ್ಲಿ ಶನಿವಾರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ಬೆಂಬಲಿಗರ ಮಧ್ಯೆ ನಡೆದ ಘರ್ಷಣೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹೌರಾದ ಬಲ್ಲಿ ಎಂಬಲ್ಲಿ ಎರಡು ಪಕ್ಷದ ಬೆಂಬಲಿಗರ ಮಧ್ಯೆ ಭುಗಿಲೆದ್ದ ಘರ್ಷಣೆ ಸಂದರ್ಭ ಕಚ್ಛಾ ಬಾಂಬ್‌ಗಳನ್ನೂ ಎಸೆದ ಕಾರಣ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನೆಲೆಸಿದೆ. ಬೈಕ್‌ಗಳು ಹಾಗೂ ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಬಲ್ಲಿ ಕ್ಷೇತ್ರದ ಶಾಸಕಿ ಬೈಶಾಕಿ ದಾಲ್ಮಿಯಾರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತುಗೊಳಿಸಲಾಗಿತ್ತು.

ಟಿಎಂಸಿ ಕಾರ್ಯಕರ್ತರು ಅಭ್ರಸೇನ್ ರಸ್ತೆಯಲ್ಲಿ ದಾಂಧಲೆ ನಡೆಸಿ ರಾಡ್ ಮತ್ತು ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಟಿಎಂಸಿ ಬೆಂಬಲಿಗರ ಗುಂಡಿನ ದಾಳಿಯಿಂದ ಬಿಜೆಪಿ ಸದಸ್ಯ ಪ್ರಮೋದ್ ದುಬೆ ಗಾಯಗೊಂಡಿದ್ದು ಅವರನ್ನು ಹೌರಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿ ದೂರಿದೆ. ಇದನ್ನು ನಿರಾಕರಿಸಿರುವ ಟಿಎಂಸಿ, ಬಿಜೆಪಿ ಸದಸ್ಯರು ಅಂಗಡಿಯವರಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ವಿರೋಧಿಸಿದ ಸ್ಥಳೀಯರು ಅವರನ್ನು ತಡೆದಾಗ ಬಿಜೆಪಿ ಕಾರ್ಯಕರ್ತರು ಘರ್ಷಣೆ ಆರಂಭಿಸಿದ್ದು ಕಚ್ಛಾ ಬಾಂಬ್ ಎಸೆದು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದೆ.

ಪಕ್ಷದ ಬೆಂಬಲಿಗರ ಮೇಲೆ ಹಲ್ಲೆ ನಡೆದಿದೆ ಎಂದು ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರು ಜಿಟಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಟಿಎಂಸಿ ಬೆಂಬಲಿಗರು ರಸ್ತೆ ತಡೆ ತೆರವಿಗೆ ಮುಂದಾದಾಗ ಘರ್ಷಣೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ರವಾನಿಸಿ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News